ಎಸ್ಸಿ, ಎಸ್ಟಿ ಅಲೆಮಾರಿಗಳ ಜಾಗಕ್ಕೆ ಹಕ್ಕುಪತ್ರ ವಿತರಣೆಗೆ ಒತ್ತಾಯ

| Published : Dec 16 2023, 02:00 AM IST

ಎಸ್ಸಿ, ಎಸ್ಟಿ ಅಲೆಮಾರಿಗಳ ಜಾಗಕ್ಕೆ ಹಕ್ಕುಪತ್ರ ವಿತರಣೆಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಮ, ಲಕ್ಷ್ಮಣ, ಆಂಜನೇಯ, ಕೃಷ್ಣಾರ್ಜುನರಂತೆ ವೇಷಧರಿಸಿ ಉಪಜೀವನ ನಡೆಸುತ್ತಿದ್ದಾರೆ. ಇನ್ನೂ ಇವರು ನೆಲೆ ಕಾಣದೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಹಕ್ಕುಪತ್ರ ವಿತರಣೆ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೊಸಪೇಟೆ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸವಿರುವ ಅಲೆಮಾರಿ ಸಮುದಾಯ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಹೂವಿನಹಡಗಲಿ ಪಟ್ಟಣದ ಸರ್ಕಾರಿ ಜಮೀನಿನ ಸರ್ವೆ ನಂ: ೫೦೯/ಜಿನಲ್ಲಿ ಟೆಂಟ್, ಗುಡಾರಗಳನ್ನು ನಿರ್ಮಿಸಿಕೊಂಡು ಎಸ್‌ಸಿ, ಎಸ್‌ಟಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯದ ಸಿಂಧೋಳ್, ಬುಡ್ಗಜಂಗಮ್, ಗೋಸಂಗಿ ಇತರೆ ಅಲೆಮಾರಿ ಜನಾಂಗದವರು ವಾಸವಾಗಿದ್ದಾರೆ.

ಇವರು ತಮ್ಮ ಕುಲವೃತ್ತಿಗಳಾದ ದುರುಗಮ್ಮ, ಮಾರೆಮ್ಮ, ಸುಂಕ್ಲಮ್ಮ ದೇವರನ್ನು ತಲೆಯ ಮೇಲೆ ಹೊತ್ತುಕೊಂಡು ಭಿಕ್ಷಾಟನೆ ಮತ್ತು ಸಣ್ಣಪುಟ್ಟ ವ್ಯಾಪಾರದಿಂದ ತಮ್ಮ ಅಲೆಮಾರಿ ಜೀವನವನ್ನು ಸಾಗಿಸುತ್ತಿದ್ದಾರೆ. ರಾಮ, ಲಕ್ಷ್ಮಣ, ಆಂಜನೇಯ, ಕೃಷ್ಣಾರ್ಜುನರಂತೆ ವೇಷಧರಿಸಿ ಉಪಜೀವನ ನಡೆಸುತ್ತಿದ್ದಾರೆ. ಇನ್ನೂ ಇವರು ನೆಲೆ ಕಾಣದೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಹಕ್ಕುಪತ್ರ ವಿತರಣೆ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಣ್ಣಮಾರೆಪ್ಪ, ಕಿನ್ನೂರಿ ಶೇಖಪ್ಪ, ಜೆ. ರಮೇಶ್, ಫಕ್ಕೀರಪ್ಪ ಬಾದಿಗಿ, ರಾಜಕುಮಾರ, ಶೇಖರ್ ಡಿ., ಶಿವಕುಮಾರ್ ಹಾಗೂ ಹನುಮಂತಪ್ಪ ಮತ್ತಿತರರಿದ್ದರು.