ಸಾರಾಂಶ
ಶಿವಮೊಗ್ಗ: ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಯೋಜನೆಗಳಲ್ಲಿ ಸೌಲಭ್ಯವನ್ನು ಒದಗಿಸಿಕೊಟ್ಟು, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.ಶಿವಮೊಗ್ಗ ಸಮೀಪದ ಗೋಂದಿಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ ನಿವಾಸಿಗಳ ಬೀದಿಗೆ ಭೇಟಿ ನೀಡಿ, ಅಲ್ಲಿನ ಬೀದಿ ದೀಪ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ, ನೈರ್ಮಲ್ಯ ಮುಂತಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದರು.ಇದೇ ವೇಳೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಿಳ್ಳೇಕ್ಯಾತ ಜನಾಂಗವು ಪರಿಶಿಷ್ಟ ಜಾತಿಗೆ ಸೇರಿದ್ದು, ಜೀವನೋಪಾಯಕ್ಕಾಗಿ ಎಲ್ಲೆಂದರಲ್ಲಿ ಚದುರಿ ಹೋಗಿ, ಜೀವನ ನಿರ್ವಹಣೆಗಾಗಿ, ನೆಮ್ಮದಿಯ ಬದುಕಿಗಾಗಿ ಅಲೆದಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ಇಲ್ಲಿನ ಅನೇಕ ಕುಟುಂಬಗಳ ಸದಸ್ಯರಿಗೆ ಸೂಕ್ತ ವಸತಿ ಸೌಲಭ್ಯವಿಲ್ಲದೇ ಒಂದೇ ಸೂರಿನಡಿ ಅನೇಕ ಕುಟುಂಬಗಳ ಜೀವನ ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಇಂತಹ ಮನೆಗಳಲ್ಲಿರುವ ಅನೇಕ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲ. ಇನ್ನೂ ಅನೇಕ ಕುಟುಂಬಗಳ ಮನೆಗಳಿಗೆ ಕನಿಷ್ಠ ವಿದ್ಯುತ್‌ಸೌಲಭ್ಯವೂ ಇಲ್ಲದಿರುವುದು ಬೇಸರ ತಂದಿದೆ. ಇಂತಹ ಕುಟುಂಬಗಳಿಗೆ ಕೂಡಲೇ ಸೌಲಭ್ಯ ಒದಗಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಪ್ರಸ್ತುತ ಇವರು ವಾಸಿಸುತ್ತಿರುವ ಅನೇಕರಿಗೆ ಹಕ್ಕುಪತ್ರಗಳಿಲ್ಲದಿರುವುದರಿಂದ ಮಳೆಗಾಲದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರಧನ ಹೊರತುಪಡಿಸಿ, ಶಾಶ್ವತ ಮನೆ ನಿರ್ಮಾಣಕ್ಕೆ ಇಲಾಖೆಯಿಂದ ದೊರೆಯಬೇಕಾದ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ಇವರಿಗೆ ತುರ್ತಾಗಿ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ಆಗಿರುವ ಅಡಚಣೆ ಹಾಗೂ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಬೇಕಲ್ಲದೇ ಕೂಡಲೇ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರರಿಗೆ ತಿಳಿಸಿದರು.ಗ್ರಾಮದಲ್ಲಿ ಸರ್ಕಾರದಿಂದ ನಿರ್ಮಿಸಿಕೊಡಲಾದ ರಸ್ತೆ, ನೀರು ಮುಂತಾದವುಗಳನ್ನು ಸರ್ಕಾರವೇ ನಿರ್ವಹಿಸುವುದು ಕಷ್ಟಕರ. ಇಲ್ಲಿನ ಗ್ರಾಮಸ್ಥರೂ ಕೂಡ ಅದರ ಸದ್ಭಳಕೆ ಮತ್ತು ರಕ್ಷಣೆಗೆ ಮುಂದಾಗಬೇಕು. ಇಲ್ಲಿನ ಬೀದಿನಾಯಿಗಳು, ಬಿಡಾಡಿ ಹಂದಿಗಳ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಡಿವೈಎಸ್ಪಿ ಸಂಜೀವಕುಮಾರ್, ಪಿಡಿಒ ಮಧು, ಅಲೆಮಾರಿ ಅಭಿವೃದ್ಧಿ ನಿಗಮದ ಸದಸ್ಯ ಸಂದೀಪ್, ತಹಸೀಲ್ದಾರ್ ರಾಜೀವ್, ನಿಗಮದ ವ್ಯವಸ್ಥಾಪಕ ಸುರೇಶ್, ಶಿಳ್ಳೇಕ್ಯಾತ ಸಮುದಾಯದ ರಾಜ್ಯಾಧ್ಯಕ್ಷ ನಾಗಪ್ಪ ಆನಂದ್ ಮತ್ತಿತರರು ಉಪಸ್ಥಿತರಿದ್ದರು.ಸಂಕಷ್ಟದಲ್ಲಿದ್ದು, ಅತ್ಯಂತ ಕನಿಷ್ಠ ಜೀವನ ನಿರ್ವಹಿಸುತ್ತಿರುವ ಶಿಳ್ಳೇಕ್ಯಾತ ಸಮುದಾಯದವರು ಮೀನುಗಾರಿಕೆ ನಡೆಸಲು ಅನುಕೂಲವಾಗುವಂತೆ ಒಂದಷ್ಟು ಕೆರೆಗಳನ್ನು ಮೀಸಲಿರಿಸಬೇಕು. ಅಲ್ಲದೇ ಮೀನುಗಾರರಿಗೆ ಅಗತ್ಯ ಸಲಕರಣೆಗಳ ಜೊತೆಗೆ ಮಾರುಕಟ್ಟೆ ಸೌಲಭ್ಯ, ಶೀತಲೀಕರಣ ಘಟಕಗಳನ್ನು ಕಲ್ಪಿಸಿಕೊಡಬೇಕು.- ನಾಗಪ್ಪ, ಶಿಳ್ಳೇಕ್ಯಾತ ಸಮುದಾಯದ ರಾಜ್ಯ ಅಧ್ಯಕ್ಷ.