ಹಳಿಯಾಳ ತಾಪಂ ತೆರಿಗೆ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸುವ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವಲ್ಲಿ ಮಾದರಿ ಹೆಜ್ಜೆಯೆನ್ನಿಟ್ಟಿದೆ ಎಂದು ಉತ್ತರ ಕನ್ನಡ ಜಿಪಂ ಉಪಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ ಹರ್ಷ ವ್ಯಕ್ತಪಡಿಸಿದರು.
ಹಳಿಯಾಳ: ಹಳಿಯಾಳ ತಾಪಂ ತೆರಿಗೆ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸುವ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವಲ್ಲಿ ಮಾದರಿ ಹೆಜ್ಜೆಯೆನ್ನಿಟ್ಟಿದೆ ಎಂದು ಉತ್ತರ ಕನ್ನಡ ಜಿಪಂ ಉಪಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ ಹರ್ಷ ವ್ಯಕ್ತಪಡಿಸಿದರು.ಪಟ್ಟಣದ ಪುರಭವನದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ 2025-26ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಳಿಯಾಳ ತಾಪಂಯನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮಗಳು ಆರ್ಥಿಕವಾಗಿ ಸಶಕ್ತವಾಗಬೇಕು. ಅದಕ್ಕಾಗಿ ತೆರಿಗೆ ಸಂಗ್ರಹಣೆ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.ತೆರಿಗೆ ವಸೂಲಾತಿ ಬಹು ಸವಾಲಿನ ಹಾಗೂ ಕಷ್ಟದ ಕೆಲಸವಾಗಿದೆ. ಆದರೆ ಹಳಿಯಾಳ ತಾಲೂಕಿನ ಎಲ್ಲ 20 ಗ್ರಾಪಂಗಳು ಒಗ್ಗಟ್ಟು ಹಾಗೂ ಶಿಸ್ತಿನಿಂದ ಜತೆಗೂಡಿ ಶ್ರಮಿಸಿದ್ದರಿಂದ ಈ ಮಹತ್ಸಾಧನೆ ಸಾಧ್ಯವಾಯಿತು. ಗ್ರಾಪಂನ ಎಲ್ಲ ವಿಭಾಗಗಳ ಸಿಬ್ಬಂದಿ ಹಗಲು ರಾತ್ರಿಯೆನ್ನದೇ ನಿಶ್ಚಿತ ಗುರಿಯೊಂದಿಗೆ ತೆರಿಗೆ ಸಂಗ್ರಹಣೆ ಜಾಥಾ, ಅಭಿಯಾನ, ಮನೆ ಮನೆ ಪ್ರಚಾರ ಮಾಡುವ ಮೂಲಕ ಯಶಸ್ಸು ಗಳಿಸಿದ್ದು, ಈ ಸಾಧನೆಯು ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ವಿಲಾಸರಾಜ್ ಪ್ರಸನ್ನ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಬೇಕಾದ ಹಣಕಾಸಿನ ವ್ಯವಸ್ಥೆಯು ಕೇವಲ ತೆರಿಗೆ ಸಂಗ್ರಹಣೆಯಿಂದ ಮಾತ್ರ ಸಾಧ್ಯ ಎಂಬ ವಿಷಯವನ್ನು ಪ್ರತಿ ಮನೆಗಳಿಗೂ, ಹಳ್ಳಿಗಳಿಗೂ ಮನವರಿಕೆ ಮಾಡುವ ದಿಸೆಯಲ್ಲಿ ಕೈಗೊಂಡ ನಮ್ಮ ಕಾರ್ಯತಂತ್ರ ಯಶಸ್ವಿಯಾಯಿತೆಂದರು.ತಾಪಂ ಸಹಾಯಕ ನಿರ್ದೇಶಕಿ ಅನುಪಮಾ ಬೆನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಸಂಯೋಜಕಿ, ಮುಖ್ಯ ಸಂಪನ್ಮೂಲ ವ್ಯಕ್ತಿ ಮಹಾದೇವಿ ಅಂಗ್ರೋಳ್ಳಿ ಅವರು ತಾಲೂಕಿನ ಆಡಳಿತ ವ್ಯವಸ್ಥೆ ಬಗ್ಗೆ ಹೇಳಿದರು. ತೆರಿಗೆ ಸಂಗ್ರಹಣೆಯಲ್ಲಿ ಎದುರಾದ ಸಮಸ್ಯೆಗಳ ಕುರಿತು ಗ್ರಾಪಂನ ವಿವಿಧ ವಿಭಾಗಗಳ ಸಿಬ್ಬಂದಿ ತಮ್ಮ ಅನುಭವ ಹಂಚಿಕೊಂಡರು.
ಸನ್ಮಾನ: ಸಮಾರಂಭದಲ್ಲಿ ಎಲ್ಲ ಇಪ್ಪತ್ತು ಗ್ರಾಪಂಗಳಿಗೆ ಅಭಿನಂದನಾ ಪ್ರಶಂಸನಾ ಪತ್ರ ವಿತರಿಸಲಾಯಿತು. ಇದೇ ಸಂದರ್ಭ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರೇರಣೆ ನೀಡಿದ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ ಹಾಗೂ ಹಳಿಯಾಳ ತಾಪಂ ಇಒ ವಿಲಾಸರಾಜ್ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್. ನೂಲಿನ್, ಜಿಪಂ ಎಂಜಿನಿಯರ್ ಸತೀಶ ಆರ್. ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಇದ್ದರು. ಪಿಡಿಒ ಈರಣ್ಣ ಇಲಾಲ್ ಹಾಗೂ ಉಮೇಶ ಗೌಡರ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಆನಂತರ ಗ್ರಾಪಂ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.