ಸಾರಾಂಶ
ರಾಮನಗರ: ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್ ಗಳ ಹಿತ ಕಾಪಾಡುವ ಉದ್ದೇಶದಿಂದ ಯೂತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ರಚನೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸೈಯದ್ ಅಕ್ಲಿಂ ಅಬ್ರಾರ್ ಮತ್ತು ಉಪಾಧ್ಯಕ್ಷರಾಗಿ ಪ್ಯಾರಿ ಫಯಾಜ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ರೀಲರ್ಸ್ ಸಭೆಯಲ್ಲಿ ಯೂತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ ತಂದು ಅಧ್ಯಕ್ಷರನ್ನಾಗಿ ಸೈಯದ್ ಅಕ್ಲಿಂ ಅಬ್ರಾರ್ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಪ್ಯಾರಿ ಫಯಾಜ್, ಕಾರ್ಯದರ್ಶಿಯಾಗಿ ಮುಸೇಬ್ , ಜಂಟಿ ಕಾರ್ಯದರ್ಶಿಯಾಗಿ ಮಹಮ್ಮದ್ ಟೀಪು, ಖಜಾಂಚಿಯಾಗಿ ಶೇಕ್ ನಾಸೀರುದ್ದೀನ್ ಅವರನ್ನು ನೇಮಿಸಿ ರೀಲರ್ಸ್ ಸರ್ವಾನುತದಿಂದ ಒಪ್ಪಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಅಕ್ಲಿಂ, ಈಗಿರುವ ರೀಲರ್ಸ್ ಅಸೋಸಿಯೇಷನ್ ಯಾವ ರೀಲರ್ಸ್‌ಗೂ ಅನುಕೂಲ ಮಾಡಿಕೊಟ್ಟಿಲ್ಲ. ಮೂರ್ನಾಲ್ಕು ಮಂದಿ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಅಸೋಸಿಯೇಷನ್ ಮುಖ್ಯಸ್ಥರ ನೇಮಕದಲ್ಲಿ ರೀಲರ್ಸ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.ಅಸೋಸಿಯೇಷನ್ ಅಧ್ಯಕ್ಷರು ಸೇರಿ ಇತರೆ ಪದಾಧಿಕಾರಿಗಳ ಸ್ಥಾನಗಳನ್ನು ಮೂರು ನಾಲ್ಕು ಮಂದಿಯೇ ನಿರ್ಧರಿಸಿ ಆಯ್ಕೆ ಮಾಡಿಕೊಂಡಿದ್ದಾರೆ. ಅಸೋಸಿಯೇಷನ್ ಸಂಪೂರ್ಣ ನಿಷ್ಕ್ರಿಯವಾಗಿದ್ದು, ನೋಂದಾಯಿತ 1250 ರೀಲರ್ಸ್ ಗಳ ಪೈಕಿ 750 ರೀಲರ್ಸ್ ಗಳು ಯೂತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ರೇಷ್ಮೆಗೂಡಿಗೆ ಸರಿಯಾದ ಬೆಲೆ ಇಲ್ಲ. ರೀಲರ್ಸ್ ಗಳಿಗೆ ಸಾಲಸೌಲಭ್ಯ ಸೇರಿ ಯಾವ ಅನುಕೂಲಗಳು ಇಲ್ಲ. ರೇಷ್ಮೆ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಇದೆಲ್ಲವನ್ನು ಬಗೆಹರಿಸಬೇಕಾದ ಅಸೋಸಿಯೇಷನ್ ಕಾಲಹರಣದಲ್ಲಿ ತೊಡಗಿದೆ ಎಂದು ಅಕ್ಲಿಂ ಟೀಕಿಸಿದರು.ನೂತನ ಉಪಾಧ್ಯಕ್ಷ ಪ್ಯಾರಿ ಫಯಾಜ್ ಮಾತನಾಡಿ, ಐದಾರು ಮಂದಿ ಸೇರಿದರೆ ಅದು ಸಂಘ ಆಗುವುದಿಲ್ಲ. ಮುಹಿಬ್ ಪಾಷಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೀಲರ್ಸ್‌ಗಳಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಈಗ ರೀಲರ್ಸ್ ಗಳು ಸಂಕಷ್ಟದಲ್ಲಿ ಸಿಲುಕಿದ್ದು, ಅಸೋಸಿಯೇಷನ್ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ.ಮುಹಿಬ್ ಪಾಷಾ ರೀಲರ್ಸ್ ಗಳ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದವರು. ರೀಲರ್ಸ್ ಗಳಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಮುಹಿಬ್ ಅಕಾಲಿಕ ನಿಧನ ಹೊಂದಿದ ನಂತರ ಅವರ ಪುತ್ರನನ್ನು ಅಸೋಸಿಯೇಷನ್ ನಲ್ಲಿ ನಿರ್ದೇಶಕರನ್ನಾಗಿ ಮಾಡಿಕೊಳ್ಳದೆ ಕಡೆಗಣಿಸಿದರು. ಈಗ ಅವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು.
ಮುಖಂಡ ಅಮ್ಜದ್ ಸಾಹುಕಾರ್ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್, ಹಿರಿಯ ಮುಖಂಡ ಜಿಯಾವುಲ್ಲಾ, ನಗರಸಭೆ ಅಧ್ಯಕ್ಷ ಶೇಷಾದ್ರಿ ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದರಿಂದ ರೀಲರ್ಸ್‌ಗಳ ಯಾವುದೇ ಸಮಸ್ಯೆಗಳಿದ್ದರೂ ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರು ಮಾತ್ರವಲ್ಲದೆ ರೀಲರ್ಸ್‌ಗಳಿಗೂ ಹೆಚ್ಚಿನ ಅನುಕೂಲ ಮಾಡಿಕೊಡಲು ಸಿದ್ಧವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಮುಖಂಡರಾದ ಮೋಸಿನ್ ಅಲಿ, ಸೈಯದ್ ನದೀಂ, ಎಕ್ಬಾಲ್, ಇಲಿಯಾಜ್, ಜವಾದ್ ಉಪಸ್ಥಿತರಿದ್ದರು.ಕೋಟ್..............
ದಕ್ಷಿಣ ಪ್ರಾಂತ್ಯಕ್ಕೆ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಕೇಂದ್ರ ಸ್ಥಾನ. ಆದರೂ ಸರ್ಕಾರದ ಸವಲತ್ತುಗಳು ರೀಲರ್ಸ್‌ಗಳಿಗೆ ಸರಿಯಾಗಿ ಸಿಗುತ್ತಿಲ್ಲ. ರೀಲರ್ಸ್‌ಗಳು ಪರಸ್ಪರ ಪೈಪೋಟಿಗೆ ಇಳಿಯದೆ ಎಲ್ಲರು ಒಮ್ಮತದಿಂದ ಸಾಗಿದರೆ ಹೆಚ್ಚಿನ ಅನುಕೂಲ ಪಡೆಯಬಹುದು.-ಅಮ್ಜದ್ ಸಾಹುಕಾರ್, ಮುಖಂಡ1ಕೆಆರ್ ಎಂಎನ್ 2.ಜೆಪಿಜಿ
ಯೂತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷ ಸೈಯದ್ ಅಕ್ಲಿಂ ಅಬ್ರಾರ್, ಉಪಾಧ್ಯಕ್ಷ ಪ್ಯಾರಿ ಫಯಾಜ್ , ಕಾರ್ಯದರ್ಶಿ ಮುಸೇಬ್ ಹಾಗೂ ಪದಾಧಿಕಾರಿಗಳನ್ನು ಮುಖಂಡರು ಅಭಿನಂದಿಸಿದರು.