ಮೊದಲ ಬಾರಿಗೆ ತುಮಕೂರಿಗೆ ಕೇಂದ್ರ ಸಚಿವ ಸ್ಥಾನ

| Published : Jun 10 2024, 12:30 AM IST

ಮೊದಲ ಬಾರಿಗೆ ತುಮಕೂರಿಗೆ ಕೇಂದ್ರ ಸಚಿವ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಪತರು ಜಿಲ್ಲೆಗೆ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಂತಾಗಿದೆ. ಪಾರ್ಲಿಮೆಂಟ್‌ನಲ್ಲಿ ತುಮಕೂರಿನ ಸಂಸದ ವಿ. ಸೋಮಣ್ಣ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇಂತದ್ದೊಂದು ಹುದ್ದೆ ತುಮಕೂರು ಪಾಲಾಗಿದ್ದು ಸಹಜವಾಗಿ ಜನರಲ್ಲಿ ಸಂತೋಷವನ್ನುಂಟು ಮಾಡಿದೆ.

ಉಗಮ ಶ್ರೀನಿವಾಸ್ ಕನ್ನಡಪ್ರಭ ವಾರ್ತೆ ತುಮಕೂರುಕಲ್ಪತರು ಜಿಲ್ಲೆಗೆ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಂತಾಗಿದೆ. ಪಾರ್ಲಿಮೆಂಟ್‌ನಲ್ಲಿ ತುಮಕೂರಿನ ಸಂಸದ ವಿ. ಸೋಮಣ್ಣ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇಂತದ್ದೊಂದು ಹುದ್ದೆ ತುಮಕೂರು ಪಾಲಾಗಿದ್ದು ಸಹಜವಾಗಿ ಜನರಲ್ಲಿ ಸಂತೋಷವನ್ನುಂಟು ಮಾಡಿದೆ.ಈ ಹಿಂದೆ ಎಸ್. ಮಲ್ಲಿಕಾರ್ಜುನಯ್ಯಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ:

ಈ ಹಿಂದೆ ವಾಜಪೇಯಿ ಸರ್ಕಾರದಲ್ಲಿ ಎಸ್. ಮಲ್ಲಿಕಾರ್ಜುನಯ್ಯ ಡೆಪ್ಯೂಟಿ ಸ್ಪೀಕರ್ ಆಗಿದ್ದರು. ಅದಾದ ಬಳಿಕ ಯಾರೊಬ್ಬರಿಗೂ ದೊಡ್ಡ ಹುದ್ದೆ ಕೇಂದ್ರದಲ್ಲಿ ಸಿಕ್ಕಿರಲಿಲ್ಲ. ಆದರೆ ಸೋಮಣ್ಣ ಕೇಂದ್ರ ಸಚಿವರಾಗುವ ಮೂಲಕ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ತುಮಕೂರಿಗೆ ಸಿಕ್ಕಂತಾಗಿದೆ.ಈ ಹಿಂದೆ ತುಮಕೂರು ಕ್ಷೇತ್ರವನ್ನು ಜಿ.ಎಸ್. ಬಸವರಾಜು ಐದು ಬಾರಿ ಪ್ರತಿನಿಧಿಸಿದ್ದರು. ಹಾಗೆಯೇ ಲಕ್ಕಪ್ಪ 4 ಬಾರಿ ಗೆದ್ದಿದ್ದರು. ಎಸ್. ಮಲ್ಲಿಕಾರ್ಜುನಯ್ಯ ಮೂರು ಬಾರಿ ಗೆದ್ದಿದ್ದರು. ಆದರೆ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ವಿ. ಸೋಮಣ್ಣ ಕೇಂದ್ರ ಸಚಿವ ಸ್ಥಾನ ಪಡೆದ ಜಿಲ್ಲೆಯ ಪ್ರಥಮರು ಎಂಬ ಖ್ಯಾತಿಗೆ ಪಾತ್ರರಾದರು.ಈ ಬಾರಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್ ಕೇಂದ್ರ ಸಚಿವ ಸ್ಥಾನದ ರೇಸ್‌ನಲ್ಲಿದ್ದರೂ ಸೋಮಣ್ಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಈಗಾಗಲೇ ತುಮಕೂರು ಸ್ಮಾರ್ಟ್ ಸಿಟಿಯಾಗಿರುವುದರಿಂದ ಕೇಂದ್ರದಲ್ಲಿ ಜಿಲ್ಲೆಯ ಸಂಸದರು ಸಚಿವರಾಗಿರುವುದರಿಂದ ಸ್ಮಾರ್ಟ್ ಸಿಟಿ ಕೆಲಸಕ್ಕೆ ಮತ್ತಷ್ಟು ವೇಗ ಬರಲಿದೆ ಎಂಬ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರೆಲ್ಲರನ್ನು ಬದಿಗೊತ್ತಿ ಸೋಮಣ್ಣ ಅವರು ಮೈತ್ರಿ ಅಭ್ಯರ್ಥಿಯಾಗಿದ್ದು ಕೂಡ ಅವರ ರಾಜಕೀಯ ಚಾಣಾಕ್ಷತನಕ್ಕೆ ನಿದರ್ಶನವಾಗಿದೆ. ಈಗ ಸೋಮಣ್ಣ ಕೇಂದ್ರ ಸಚಿವರಾಗಿದ್ದಾರೆ. ತುಮಕೂರಿಗೆ ಹಲವಾರು ಕೆಲಸಗಳು ಆಗಬೇಕಾಗಿದೆ. ಅವೆಲ್ಲದ್ದಕ್ಕೂ ವೇಗ ಬರಬಹುದು.

ತುಮಕೂರು- ದಾವಣಗೆರೆ ರೈಲ್ವೆ ಯೋಜನೆ, ತುಮಕೂರು ರಾಯದುರ್ಗ ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಉತ್ತರ ಕರ್ನಾಟಕವನ್ನು ಬೆಂಗಳೂರಿನಿಂದ ಕೇವಲ 2 ಗಂಟೆಗಳಲ್ಲಿ ಸಂಪರ್ಕಿಸುವ ತುಮಕೂರು ದಾವಣಗೆರೆ ರೈಲ್ವೆ ಮಾರ್ಗ ಯೋಜನೆ ಟೇಕಾಫ್ ಆದರೆ ಮಧ್ಯ ಕರ್ನಾಟಕ, ಬೆಂಗಳೂರು, ತುಮಕೂರು ಹಾಗೂ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಹಾಗೆಯೇ ತುಮಕೂರು ರಾಯದುರ್ಗ ರೈಲ್ವೆ ಯೋಜನೆಗಳು ವೇಗ ಪಡೆದರೆ ಆಂಧ್ರ ಪ್ರದೇಶವನ್ನು ತುಮಕೂರಿನಿಂದ ಸುಲಭವಾಗಿ ಸಂಪರ್ಕಿಸಬಹುದು.

ಹಾಗೆಯೇ ಮೆಟ್ರೋ ಯೋಜನೆಗಳು ತುಮಕೂರಿನವರೆಗೂ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆಗಳು ಕೂಡ ಸೋಮಣ್ಣ ಕಾಲದಲ್ಲಿ ಕ್ಷಿಪ್ರಗತಿಯಲ್ಲಿ ಮುಗಿಯಬಹುದು ಎಂದು ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಆರಂಭದಿಂದಲೂ ತುಮಕೂರನ್ನು ಎರಡನೇ ಕಾಶಿ ಮಾಡುತ್ತೇನೆಂದು ಹೇಳುತ್ತಿದ್ದ ಸೋಮಣ್ಣಗೆ ಈಗ ಕೇಂದ್ರ ಸಚಿವ ಸ್ಥಾನ ಕೂಡ ಸಿಕ್ಕಿರುವುದು, ಅವರ ಆಲೋಚನೆಗಳಿಗೆ ದೊಡ್ಡ ಮಟ್ಟದ ಇಂಬು ಕೊಟ್ಟಂತಾಗುತ್ತದೆ.

ಫಿನಿಕ್ಸ್‌ನಂತೆ ಮೇಲೆದ್ದ ಸೋಮಣ್ಣ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸೋಮಣ್ಣ ರಾಜಕೀಯ ಜೀವನ ಮುಗಿದೇ ಹೋಯಿತು ಎಂದು ಚರ್ಚೆ ಆರಂಭವಾಗುತ್ತಿತ್ತು. ಆದರೆ ತುಮಕೂರಿನಲ್ಲಿ ಆಗ ಸಂಸದರಾಗಿದ್ದ ಜಿ.ಎಸ್. ಬಸವರಾಜು ವಯಸ್ಸಿನ ಕಾರಣದಿಂದ ನಿವೃತ್ತಿ ಹೊಂದಿದ ಕಾರಣ ಅವರ ಬದಲಿಗೆ ಸೋಮಣ್ಣಗೆ ಟಿಕೆಟ್ ನೀಡಲಾಯಿತು.ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೋಮಣ್ಣ ಮೊದಲ ದಿನದಿಂದಲೇ ಕ್ಷೇತ್ರವನ್ನೂ ಸುತ್ತಿದರು. ಪಕ್ಷದ ಒಳಗಿನ ಒಡಕನ್ನು ನಿವಾರಿಸಿದರು. ಮಿತ್ರ ಪಕ್ಷದ ಮುಖಂಡರನ್ನು ವಿಶ್ವಾಸ ತೆಗೆದುಕೊಂಡರು. ಇದರ ಪರಿಣಾಮ 1,75,594 ಮತಗಳ ಅಂತರದಿಂದ ಜಯಶಾಲಿಯಾದರು.