ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಕೊರತೆ ಎದುರಾಗುತ್ತಿರುವುದನ್ನು ಮನಗಂಡು ‘ನಾವು ಪ್ರತಿಷ್ಠಾನ’ ವತಿಯಿಂದ ೫ನೇ ವರ್ಷದ ‘ಹಕ್ಕಿಗೊಂದು ಗುಟುಕು ಅಭಿಯಾನ-೨೦೨೬’ವನ್ನು ಮಾ. ೨೦ರಿಂದ ಏ. ೨೨ರವರೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ.
ಸೋಮವಾರಪೇಟೆ: ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಕೊರತೆ ಎದುರಾಗುತ್ತಿರುವುದನ್ನು ಮನಗಂಡು ‘ನಾವು ಪ್ರತಿಷ್ಠಾನ’ ವತಿಯಿಂದ ೫ನೇ ವರ್ಷದ ‘ಹಕ್ಕಿಗೊಂದು ಗುಟುಕು ಅಭಿಯಾನ-೨೦೨೬’ವನ್ನು ಮಾ. ೨೦ರಿಂದ ಏ. ೨೨ರವರೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ.ಜನರು ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಣ್ಣ ಪಾತ್ರೆಗಳಲ್ಲಿ ನೀರು ಮತ್ತು ಧಾನ್ಯಗಳನ್ನು ಇಡುವ ಮೂಲಕ ಪಕ್ಷಿಗಳಿಗೆ ಸಹಾಯ ಮಾಡಬಹುದು. ಈ ಸರಳ ಕಾರ್ಯವೇ ಅನೇಕ ಪಕ್ಷಿಗಳ ಜೀವ ಉಳಿಸಲು ನೆರವಾಗುತ್ತದೆ ಎಂಬ ಸಂದೇಶವನ್ನು ಅಭಿಯಾನ ಸಾರುತ್ತಿದೆ.
ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ತಮ್ಮ ಪ್ರದೇಶದಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸಿ, ಅದರ ಫೋಟೋವನ್ನು ವಾಟ್ಸಾಪ್ ಸಂಖ್ಯೆ ೯೮೮೦೦೫೦೮೮೧ಕ್ಕೆ ಕಳುಹಿಸುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬಹುದು. ಉತ್ತಮ ಕಾರ್ಯವನ್ನು ಪ್ರೇರೇಪಿಸಲು ಆಯ್ಕೆಯಾದ ಎರಡು ಫೋಟೋಗಳಿಗೆ ಬಹುಮಾನ ನೀಡಲಾಗುವುದು. ಫೋಟೋ ಕಳುಹಿಸುವ ಪ್ರಾರಂಭ ದಿನಾಂಕ ಮಾರ್ಚ್ ೨೦ (ಗುಬ್ಬಿ ದಿನ) ಆಗಿದ್ದು, ಕೊನೆಯ ದಿನಾಂಕ ಏ. ೨೨ (ವಿಶ್ವ ಭೂ ದಿನ) ಆಗಿದೆ.ಸಣ್ಣ ಕೆಲಸಗಳೇ ದೊಡ್ಡ ಬದಲಾವಣೆ ತರಬಲ್ಲವು. ಒಂದು ಹನಿ ನೀರು ಪಕ್ಷಿಗಳ ಜೀವ ಉಳಿಸಬಹುದು. ಈ ಅಭಿಯಾನವು ಮಕ್ಕಳಲ್ಲಿ ದಯೆ ಮತ್ತು ಜವಾಬ್ದಾರಿತನವನ್ನು ಬೆಳೆಸುತ್ತದೆ ಎಂದು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ ತಿಳಿಸಿದ್ದಾರೆ. ಇದು ಸ್ಪರ್ಧೆಯಲ್ಲ. ಸಮುದಾಯದಲ್ಲಿ ಸಹ ಜೀವಿಗಳೊಂದಿಗೆ ಸೌಹಾರ್ದ ಬೆಳೆಸುವುದು ಮತ್ತು ಜೀವಿಗಳ ಮೇಲೆ ದಯೆ ಮೂಡಿಸುವುದೇ ಮುಖ್ಯ ಉದ್ದೇಶ. ಪಕ್ಷಿ ಸಂಕುಲಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು ತಿಳಿಸಿದ್ದಾರೆ.