ಸಾರಾಂಶ
ಮುನಿರಾಬಾದ್:
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾ, ಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ. ಇದರ ಪರಿಣಾಮ ತುಂಗಭದ್ರಾ ಜಲಾಯಶಕ್ಕೆ 1.30 ಲಕ್ಷ ಕ್ಯುಸೆಕ್ ನೀರು ಹರಿದು ಬಂದ ಪರಿಣಾಮ ನದಿಗೆ 26 ಗೇಟ್‌ಗಳ ಮೂಲಕ 1.18 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ.ಸತತವಾಗಿ ಮೂರನೇ ದಿನವೂ ನದಿಗೆ 1 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚಿನ ನೀರು ಹರಿಸಿದ ಪರಿಣಾಮ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಹಂಪಿ ಸ್ಮಾರಕಗಳು ಮುಳುಗಡೆಯಾಗಿದ್ದರೆ ಗಂಗಾವತಿ ಹಾಗೂ ಕಂಪ್ಲಿ ನಡುವಿನ ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ.
ಜನರಿಗೆ ಆತಂಕ:ನದಿ ಪಾತ್ರದ ಜನರು ನದಿಗೆ ಅಪಾರ ಪ್ರಮಾಣದ ನೀರು ಹರಿಸಿದ ಪರಿಣಾಮ ಆತಂಕಕ್ಕೆ ಒಳಗಾಗಿದ್ದಾರೆ. ಮಲೆನಾಡಿನಲ್ಲಿ ಮಳೆ ಅಬ್ಬರ ಇನ್ನೂ ಮುಂದುವರಿಸಿದ್ದು ಆ ನೀರು ಜಲಾಶಯಕ್ಕೆ ಬಂದರೆ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತದೆ. ಇದರ ಪರಿಣಾಮ ನದಿ ಅಂಚಿನಲ್ಲಿರುವ ಬೆಳೆಗಳು ಜಲಾವೃತವಾಗುತ್ತವೆ ಎಂಬ ಭಯ ಶುರುವಾಗಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಎಲ್ಲಿ ಕೊಚ್ಚಿಕೊಂಡು ಹೋಗುತ್ತದೆ ಎಂಬ ಆತಂಕವೂ ಶುರುವಾಗಿದೆ. ಇದರ ಮಧ್ಯೆ ತುಂಗಭದ್ರಾ ಜಲಾಶಯದ ಮಂಡಳಿ ಅಧಿಕಾರಿಗಳು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು. ಒಳಹರಿವು ಹೆಚ್ಚಾದಂತೆ ನದಿಗೆ ನೀರು ಬಿಡುವ ಪ್ರಮಾಣವು ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.