ಸಾರಾಂಶ
ಬಗರ್ ಹುಕುಂ ರೈತರಿಗೆ ಭೂಮಿ ಒದಗಿಸುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ : ಬಗರ್ ಹುಕುಂ ರೈತರಿಗೆ ಭೂಮಿ ಒದಗಿಸುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ, ಗೋಮಾಳ, ಹುಲ್ಲುಬನ್ನಿ, ಸೇಂದಿ ವನ ಇನ್ನಿತರೆ ಭೂಮಿಗಳಲ್ಲಿ ಜೀವನೋಪಾಯಕ್ಕಾಗಿ ಉಳುಮೆ ಮಾಡುತ್ತ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಮಿತಿಗಳು ರಚನೆಯಾಗಿದ್ದರೂ ಕಾಲ ಕಾಲಕ್ಕೆ ಸಭೆ ನಡೆಯುತ್ತಿಲ್ಲ. ಹಾಗಾಗಿ, ಅಧಿಕಾರಿಗಳು ಹೋರಾಟ ಸಮಿತಿಯ ಮುಖಂಡರುಗಳನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಸಭೆ ನಡೆಸಿ ಭೂಮಿಗೆ ಸಂಬಂಧಿಸಿದ ಗೊಂದಲ ಪರಿಹರಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಭೂಮಿ ಸಾಗುವಳಿ ಮಾಡುತ್ತಿರುವವರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸದೆ ಬಡವರಿಗೆ ನ್ಯಾಯ ನೀಡುವಲ್ಲಿ ಪಾರದರ್ಶಕವಾಗಿ ತೀರ್ಮಾನ ವಾಗಬೇಕು. ಅರಣ್ಯ ಭೂಮಿ ಕಂದಾಯ ಭೂಮಿಯ ಗೊಂದಲಗಳಿದ್ದು, ಜಂಟಿ ಸರ್ವೆ ಮೂಲಕ ಸರಿಪಡಿಸಿ ಯಾರನ್ನು ಒಕ್ಕಲೆಬ್ಬಿಸಬಾರದು. ನಗರ ಮಿತಿಯ ನೆಪದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡದೆ ವಂಚಿಸಲಾಗುತ್ತಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಒನ್ ಟೈಮ್ ಸೆಟ್ಲ್‍ಮೆಂಟ್ ಜಾರಿಗೊಳಿಸಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
94 ಸಿ ಮತ್ತು 94 ಸಿಸಿ ಅಡಿಯಲ್ಲಿ ವಸತಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂಮಿ ಸಾಗುವಳಿ ಮಾಡುತ್ತ ಫಾರಂ ನಂ.50, 53 57 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಭೂಮಿ ಮಂಜೂರಾತಿ ಕೊಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಸದಸ್ಯ ಕುಮಾರ್ ಸಮತಳ, ಕಾರ್ಯದರ್ಶಿ ಹನುಮಂತಣ್ಣ, ಈರಜ್ಜ, ಕರಿಯಣ್ಣ, ಸುನಂದಮ್ಮ, ವೆಂಕಟೇಶ್, ನಾಗಣ್ಣ, ಚಂದ್ರಣ್ಣ, ಪುರುಷೋತ್ತಮ್, ವಿಜಯಮ್ಮ, ಕೆ.ಬಿ.ನಾಗರಾಜ್, ರಾಮಚಂದ್ರಪ್ಪ, ಕೆಂಚಪ್ಪ, ರಮೇಶಪ್ಪ, ನೆಲ್ಲಿಕಟ್ಟೆ ಗೌರಮ್ಮ, ಎಂ.ಟಿ.ರಂಗನಾಥ್, ತಿಮ್ಮಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.