ಸಾರಾಂಶ
ಹೂವಿನಹಡಗಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘವು ಕಚೇರಿಯ ಕರ್ತವ್ಯವನ್ನು ಬಹಿಷ್ಕಾರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.ಇಲ್ಲಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ಗುರುವಾರ ಮುಷ್ಕರ ಮಾಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕ ಅಧ್ಯಕ್ಷ ಡಿ.ಜಿ. ಮಲ್ಲೇಶ ನಾಯ್ಕ, ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರದಿಂದ ಅಭಿವೃದ್ಧಿ ಪಡಿಸಿರುವ 21 ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದರಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕೆಂದು ಒತ್ತಾಯಿಸಿದರು.ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಎಂ.ಪಿ.ಎಂ.ಅಶೋಕ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳು, ನಿರಂತರವಾಗಿ ಒತ್ತಡಗಳಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜತೆಗೆ ಹೆಚ್ಚಿನ ಮಟ್ಟದಲ್ಲಿ ಮೃತರಾಗುತ್ತಿದ್ದಾರೆ. ಅಧಿಕಾರಿಗಳ ಮೇಲೆ ಕರ್ತವ್ಯದ ಸಂದರ್ಭದಲ್ಲಿ, ಮಾರಣಾಂತಿಕ ಹಲ್ಲೆ ಹಾಗೂ ಪ್ರಾಣ ಬೆದರಿಕೆಗಳನ್ನು ನಡೆಯುತ್ತಿವೆ ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಕೂಡಲೇ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಸಾಕಷ್ಟು ಒತ್ತಡಗಳ ಮಧ್ಯೆ ಕಾರ್ಯನಿರ್ವಹಿಸಲು ದೈಹಿಕ ಹಾಗೂ ಮಾನಸಿಕವಾಗಿ, ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಲಾಖೆ ಕೆಲವು ಸಾಧನಗಳನ್ನು ಒದಗಿಸುವವರೆಗೂ ಆಧಾರ್ ಸೀಡ್, ಲ್ಯಾಂಡ್‌ಬೀಟ್, ಬಗೈರ್‌ಹುಕುಂ, ಹಕ್ಕುಪತ್ರ, ಪೌತಿ ಆಂದೋಲನ, ನಮೂನೆ 1 ರಿಂದ 5ರ ವರೆಗೆ ವೆಬ್ ಅಪ್ಲಿಕೇಷನ್ ನಿರ್ವಹಿಸುವುದಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಅಂತರ್ ಜಿಲ್ಲಾ ಪತಿ-ಪತ್ನಿ ವರ್ಗಾವಣೆ ಪ್ರಕಣದಲ್ಲಿ, ಕೂಡಲೇ ವರ್ಗಾವಣೆ ಆದೇಶವನ್ನು ನೀಡಬೇಕು. ಜತೆಗೆ ಇಲಾಖೆಯಲ್ಲಿ 3 ವರ್ಷ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಯನ್ನು ನೀಡಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಮುಷ್ಕರಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂಪಿಎಂ ಅಶೋಕ, ಗ್ರಾಪಂ ಪಿಡಿಒ ಸಂಘದ ಅಧ್ಯಕ್ಷ ವೀರಣ್ಣ ನಾಯ್ಕ, ಆರೋಗ್ಯ ಇಲಾಖೆಯ ರತ್ನಾಕರ, ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬೆನ್ನೂರು ಹಾಲೇಶ, ಗ್ರಾಮ ಆಡಳಿತ ಅಧಿಕಾರಿ ಸಂಘದ ಉಪಾಧ್ಯಕ್ಷ ಸಿದ್ದಲಿಂಗೇಶ, ಕಾರ್ಯದರ್ಶಿ ಸೋಮಪ್ಪ, ಖಜಾಂಚಿ ಪ್ರವೀಣ್, ಅಶೋಕ, ಎಂ.ಮನೋಹರ, ಜಗದೀಶ, ಮೋಮಿನ್, ಆಶಾ, ಪವಿತ್ರಾ ಬಾಯಿ, ನಾಗರತ್ನಮ್ಮ, ಕೊಟ್ರೇಶ್, ಪ್ರಶಾಂತ, ಕರಿಯಪ್ಪ, ಮಂಜುನಾಥ ಸೇರಿದಂತೆ ಎಲ್ಲ ಗ್ರಾಮ ಸಹಾಯಕರು ಕಪ್ಪು ಬಟ್ಟೆ ಧರಿಸಿ ತಹಸೀಲ್ದಾರ್ ಜಿ.ಸಂತೋಷ ಇವರಿಗೆ ಮನವಿ ಸಲ್ಲಿಸಿದರು.