ರಾಜ್ಯದ ಮಸಣ ಕಾರ್ಮಿಕರ ಗಣತಿಗೆ ಒತ್ತಾಯ

| Published : Aug 31 2024, 01:31 AM IST

ಸಾರಾಂಶ

ರಾಜ್ಯದ ಮಸಣ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕ ಯು. ಬಸವರಾಜ ಒತ್ತಾಯಿಸಿದರು. ಎಲ್ಲ ಮಸಣಗಳಲ್ಲಿ ಪಾರಂಪರಿಕವಾಗಿ ಕಾರ್ಯ ನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳ ಸದಸ್ಯರ ಗಣತಿ ಮಾಡಬೇಕು ಮತ್ತು ಅವರ ಪುನರ್ವಸತಿಗೆ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

ಹೊಸಪೇಟೆ: ರಾಜ್ಯದ ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರು ಎಂದು ಪರಿಗಣಿಸಬೇಕು. ಮಸಣ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಸರ್ಕಾರ ಗಣತಿ ಕಾರ್ಯ ನಡೆಸಬೇಕು ಎಂದು ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕ ಯು. ಬಸವರಾಜ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸಣ ಕಾರ್ಮಿಕರು ಬಹುತೇಕ ಬಿಟ್ಟಿ ಚಾಕರಿಯಲ್ಲಿ ತೊಡಗಿದ್ದಾರೆ. ಈಗ ರಾಜ್ಯ ಸರ್ಕಾರ ಮಸಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರವರ್ಗಗಳಡಿ ಶಿಕ್ಷಣ ಸಂಸ್ಥೆಗಳಿಗೆ ನೇರ ಪ್ರವೇಶ ನೀಡಲು, ಮತ್ತಿತರ ಸೌಲಭ್ಯ ಒದಗಿಸಲು ಕ್ರಮವಹಿಸಿದೆ. ಈ ಮೀಸಲು ಸೌಲಭ್ಯವನ್ನು ಅವರ ಉನ್ನತ ಶಿಕ್ಷಣಕ್ಕೆ ಹಾಗೂ ಇತರ ಆರ್ಥಿಕ ಸೌಲಭ್ಯಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಈ ಸೌಲಭ್ಯ ಪಡೆಯಲು ಮಸಣ ಕಾರ್ಮಿಕರು ಎಂಬ ಸರ್ಟಿಫಿಕೆಟ್ ಕೇಳುತ್ತಿದ್ದಾರೆ. ಹಾಗಾಗಿ ಸರ್ಕಾರ ಗಣತಿ ನಡೆಸಿ, ಪ್ರಮಾಣಪತ್ರ ನೀಡಬೇಕು. ಕನಿಷ್ಠ 45 ವಯೋಮಾನದಿಂದ ಮಾಸಿಕ ₹3,000 ಗಳ ಪಿಂಚಣಿ ಘೋಷಿಸಬೇಕು. ಕುಣಿ ಅಗೆದು ಮತ್ತು ಶವ ಹೂಳುವ ಕೆಲಸವನ್ನು ಉದ್ಯೋಗ ಖಾತ್ರಿಯಡಿ ತಂದು ಅದನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಬೇಕು. ಸುರಕ್ಷತಾ ಕ್ರಮಗಳು ಮತ್ತು ಪರಿಕರಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಎಲ್ಲ ಮಸಣಗಳಲ್ಲಿ ಪಾರಂಪರಿಕವಾಗಿ ಕಾರ್ಯ ನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳ ಸದಸ್ಯರ ಗಣತಿ ಮಾಡಬೇಕು ಮತ್ತು ಅವರ ಪುನರ್ವಸತಿಗೆ ಕ್ರಮವಹಿಸಬೇಕು. 45 ವರ್ಷದ ಎಲ್ಲ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ ₹3,000ಗಳನ್ನು ಘೋಷಿಸಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ ₹4000 ಕೂಲಿ ಪಾವತಿಸುವಂತೆ ಕ್ರಮ ವಹಿಸಬೇಕು. ಮಸಣ ಕಾರ್ಮಿಕರಿಗೆ ಮಸಣದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಕುಣಿ ಅಗೆಯುವ ಮತ್ತು ಮುಚ್ಚುವ ಅಗತ್ಯ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ಒದಗಿಸಬೇಕು. ಅದೇ ರೀತಿ, ಕಾರ್ಮಿಕರ ಶುಚಿಗಾಗಿ ಸಾಬೂನುಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಮಸಣ ಕಾರ್ಮಿಕರ ಸಂಘದ ಸಹ ಸಂಚಾಲಕರಾದ ಬಿ. ಮಾಳಮ್ಮ, ಭಾಸ್ಕರ್ ರೆಡ್ಡಿ, ರುದ್ರೇಶ್‌, ಓಬಣ್ಣ, ಕಲ್ಯಾಣಪ್ಪ, ಹುಚ್ಚಪ್ಪ ಇದ್ದರು.