ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಬಲವಂತ ಮಾಡಿ ಸಾಲ ವಸೂಲಿ ಮಾಡುವುದು ಸಲ್ಲದು ಎಂದು ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ಹಣಕಾಸು ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಲವಾರು ಹಣಕಾಸು ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ತಹಸೀಲ್ದಾರ್ ಖಡಕ್ ಎಚ್ಚರಿಕೆ ನೀಡಿದರು.ಹಲವಾರು ಸಂಘ ಸಂಸ್ಥೆಯವರು ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನ ಮೈಕ್ರೋ ಫೈನಾನ್ಸ್ ಮುಖ್ಯಸ್ಥರ ಸಭೆ ನಡೆಸಲಾಯಿತು. ಸಭೆಯಲ್ಲಿ ೩೮ ಕ್ಕೂ ಹೆಚ್ಚು ಫೈನಾನ್ಸ್ ಕಂಪನಿಗಳ ಮುಖ್ಯಸ್ಥರುಗಳು ಭಾಗಿಯಾಗಿದ್ದರು. ಫೈನಾನ್ಸ್ ಕಂಪನಿಗಳು ಸಾಲ ಕೊಟ್ಟು ವಸೂಲಿ ನೆಪದಲ್ಲಿ ಬಡ ಜನರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಆರ್.ಬಿ.ಐ ನೀಡಿರುವ ಕಾನೂನು ಸಲಹೆಗಳನ್ನು ಪಾಲಿಸಬೇಕು. ತಾಲೂಕಿನ ಯಾವುದೇ ವ್ಯಕ್ತಿ ದೂರು ನೀಡಿದರೆ ಫೈನಾನ್ಸ್ ಕಂಪನಿಗಳ ವ್ಯವಸ್ಥಾಪಕರು ಮತ್ತು ಸಿಬಂದಿ ವರ್ಗದವರ ಮೇಲೆ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದುವರೆಗೂ ಮೈಕ್ರೋ ಫೈನಾನ್ಸ್ ನಲ್ಲಿ ಕನಿಷ್ಠ ದಾಖಲೆಗಳನ್ನು ಪಡೆದು ಸಾಲ ಪಡೆದು ಕಷ್ಟವೋ ಸುಖವೋ ತಮ್ಮ ಮನೆಯ ಸಮಸ್ಯೆ ತೀರುತ್ತಿತ್ತು. ಹಲವಾರು ಮಂದಿ ಸಾಲ ಪಡೆದು ಆರ್ಥಿಕವಾಗಿ ಮುಂದುವರೆದಿರುವುದೂ ಸಹ ಉಂಟು. ಮುಂಬರುವ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಗಳು ಸಾಲ ನೀಡದಿದ್ದಲ್ಲಿ ಜನ ಸಾಮಾನ್ಯರ ಆರ್ಥಿಕ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾಗಿ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸರಳ ನಿಬಂಧನೆಗಳೊಂದಿಗೆ ಸಾಲ ನೀಡುವುದು. ಮೈಕ್ರೋ ಫೈನಾನ್ಸ್ ಗಳಲ್ಲಿ ಕಡಿಮೆ ಬಡ್ಡಿ ಮಾಡಿಸುವುದು ಸೂಕ್ತವಾದುದು ಎಂಬ ಸಲಹೆಯೂ ಸಹ ಸಭೆಯಲ್ಲಿ ಬಂದಿತು.