ಸಾರಾಂಶ
ಇಚ್ಛಾಮರಣಕ್ಕೆ ನನ್ನ ಹೆಸರು ನೋಂದಣಿ
ಕನ್ನಡಪ್ರಭ ವಾರ್ತೆ ದಾವಣಗೆರೆದೇಶದ ಎಲ್ಲಾ ರಾಜ್ಯಗಳಲ್ಲೂ ದಯಾಮರಣ, ಇಚ್ಛಾಮರಣ ಕಾನೂನನ್ನು ಏಕರೂಪದಲ್ಲಿ ಜಾರಿಗೊಳಿಸುವಂತೆ ದಾವಣಗೆರೆಯ ದಯಾಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ಕೇಂದ್ರ ಸರ್ಕಾರ, ದೇಶದ ವಿವಿಧ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದಯಾಮರಣ, ಇಚ್ಛಾಮರಣದ ಕಾನೂನು ಜಾರಿಗಾಗಿ ಕಳೆದ 24 ವರ್ಷದಿಂದಲೂ ತಾವು ನಡೆಸಿದ್ದ ನಿರಂತರ ಹೋರಾಟದ ಫಲವಾಗಿ ಇದೀಗ ರಾಜ್ಯ ಸರ್ಕಾರ ಫೆ.1ರಂದು ಗೌರವಯುತ ಮರಣ ಕಾನೂನು ಜಾರಿಗೆ ಮುಂದಾಗಿರುವುದು ನನ್ನ ಹೋರಾಟಕ್ಕೆ ಸ್ಪಂದಿಸಿದಂತಾಗಿದೆ ಎಂದರು.ಕರ್ನಾಟಕ ಮಾದರಿಯಲ್ಲಿ ದೇಶವ್ಯಾಪಿ ಇಂತಹ ಕಾನೂನನ್ನು ಏಕರೂಪವಾಗಿ ಜಾರಿಗೊಳಿಸಬೇಕು. ದೇಶದ ಇತರೆ ಎಲ್ಲಾ ರಾಜ್ಯಗಳಲ್ಲೂ ಇಂತಹ ಕಾನೂನು ತರಬೇಕು. 1938ರಲ್ಲಿ ಎಂ.ಸಿ.ದಾದಾ ಎಂಬುವರು ಲೋಕಸಭೆಯಲ್ಲಿ ದಯಾಮರಣ, ಇಚ್ಛಾಮರಣ ಕಾನೂನು ಜಾರಿಗೊಳಿಸುವಂತೆ ದೇಶದಲ್ಲೇ ಮೊದಲ ಬಾರಿಗೆ ಧ್ವನಿ ಎತ್ತಿದ್ದರು ಎಂದು ತಿಳಿಸಿದರು.
ನಂತರ 1942ರಲ್ಲಿ ಮತ್ತೆ ದಯಾಮರಣ, ಇಚ್ಛಾಮರಣ ಕಾನೂನು ಬಗ್ಗೆ ಪ್ರಸ್ತಾಪವೂ ಆಗಿತ್ತು. ನಂತರ ಅನೇಕ ಕಾರಣಕ್ಕಾಗಿ ಅದು ಮತ್ತೆ ಚರ್ಚೆಗೆ ಬರಲಿಲ್ಲ, ಪ್ರಸ್ತಾಪವೂ ಆಗಲಿಲ್ಲ. ದಯಾಮರಣ, ಇಚ್ಛಾಮರಣಕ್ಕಾಗಿ ನನ್ನ ಹೋರಾಟವು ಮುಂದುವರಿಯುತ್ತದೆ. ನನ್ನ ಹೋರಾಟಕ್ಕೆ ಕೆಲವರು ಹಿಂದಿನಿಂದಲೂ ವಿರೋಧ, ಬೇಸರ, ಆಕ್ಷೇಪ ವ್ಯಕ್ತಪಡಿಸಿಕೊಂಡೇ ಬಂದಿದ್ದರು ಎಂದು ಹೇಳಿದರು.ಕಡೆಗೂ ರಾಜ್ಯ ಸರ್ಕಾರವು ಗೌರವಯುತ ಮರಣ ಕಾನೂನು ಜಾರಿಗೆ ಮುಂದಾಗಿದ್ದು ಸ್ವಾಗತಾರ್ಹ. ಬಹುತೇಕರು ದಯಾಮರಣ, ಇಚ್ಛಾಮರಣವೆಂದರೆ ತಪ್ಪಾಗಿ ತಿಳಿದಿದ್ದಾರೆ. ದೇಶದಲ್ಲಿ ಕೋಟ್ಯಾಂತರ ವಯಸ್ಸಾದವರಿದ್ದು, ಇದರಲ್ಲಿ ಅನೇಕರು ಮಾರಣಾಂತಿಕ, ಗುಣಪಡಿಸಲಾಗದ ವ್ಯಾದಿ, ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒಂದು ಕಡೆ ಕೌಟುಂಬಿಕ ಅಸಹಕಾರ, ಮತ್ತೊಂದು ಕಡೆಗೆ ಚಿಕಿತ್ಸೆಗೆ ಹಣ ಇಲ್ಲದೇ ಜೀವನದ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು.
ದಯಾಮರಣ, ಇಚ್ಛಾಮರಣ ಕಾನೂನು ದುರ್ಬಳಕೆಯಾಗುವುದಿಲ್ಲ. ಯಾರು ತೀರಾ ಅಸಹಾಯಕ ಸ್ಥಿತಿಯಲ್ಲಿರುವರೋ ಅಂತಹವರು ಗೌರವಯುತವಾಗಿ, ನೆಮ್ಮದಿನ ಸಾವು ಕಾಣುವಂತಾಗಬೇಕು. ನಾನೇ ದಯಾಮರಣ, ಇಚ್ಛಾಮರಣಕ್ಕಾಗಿ ಹೋರಾಟ ನಡೆಸಿದ್ದೇನೆ. ಈಗಾಗಲೇ ದಯಾ ಮರಣ, ಇಚ್ಛಾ ಮರಣಕ್ಕೆ ನೋಂದಣಿ ಸಹ ಮಾಡಿಸಿದ್ದೇನೆ. ನಾನು ದಯಾಮರಣ, ಇಚ್ಛಾಮರಣ ಹೊಂದಲು ಸಿದ್ಧವಾಗಿದ್ದೇನೆ. ಇಂತಹದ್ದೊಂದು ಕಾನೂನಿನ ಬಗ್ಗೆ ಪ್ರಸ್ತಾಪಿಸಿ, ಜಾರಿಗೆ ಮುಂದಾದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.ಶಾಂತಮ್ಮ, ವಿಜಯಕುಮಾರ, ಟಿ.ಎಸ್.ಚಿಟ್ನೀಸ್ ಇತರರು ಇದ್ದರು.