ಸಾರಾಂಶ
ಎನ್‌ಎಸ್‌ಯುಐ ವತಿಯಿಂದ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಭದ್ರಾವತಿ
ವಿವಿಧ ಮೀಸಲಾತಿಯಡಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭರ್ತಿಯಾಗದೆ ಉಳಿದಿರುವ ಸ್ನಾತಕೋತ್ತರ ತರಗತಿ ಪ್ರವೇಶಗಳಿಗೆ ಇತರೆ ಮೀಸಲಾತಿಯಡಿ ವಂಚಿತರಾಗಿವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿ ಎನ್‌ಎಸ್‌ಯುಐ ವತಿಯಿಂದ ಮಂಗಳವಾರ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಸ್ನಾತಕೋತ್ತರ ತರಗತಿ ಪ್ರವೇಶ ಮುಕ್ತಾಯವಾಗಿದ್ದು, ಪರಿಶಿಷ್ಟ ಜಾತಿ/ಪಂಗಡದ ಹಾಗೂ ವಿಕಲಚೇತನರ ಮೀಸಲಾತಿಯಡಿ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯದ ಹಿನ್ನಲೆಯಲ್ಲಿ ವಂಚಿತರಾಗಿರುವ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುವುದು. ವರ್ಷದಿಂದ ವರ್ಷಕ್ಕೆ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದಲ್ಲೂ ಪ್ರವೇಶಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರವೇಶ ಸಿಗದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭಾಸದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಹೆಚ್ಚಿಸುವಂತೆ ಕೋರಲಾಗಿದೆ.
ಎನ್‌ಎಸ್‌ಯುಐ ಅಧ್ಯಕ್ಷ ಮುಸ್ವೀರ್ ಬಾಷಾ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ವೇಳೆ ಗೌರವಾಧ್ಯಕ್ಷ ಮುರುಗೇಶ್, ಉಪಾಧ್ಯಕ್ಷರಾದ ಕೀರ್ತಿ, ಮಾದೇಶ, ಮುಖಂಡರಾದ ಟಿ.ಡಿ ಶಶಿಕುಮಾರ್, ವೇಲು ಹಾಗು ಪ್ರವೇಶಾತಿಯಿಂದ ವಂಚಿತರಾದ ವಿದ್ಯಾರ್ಥಿಗಳು ಇದ್ದರು.