ಸಾರಾಂಶ
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯವರನ್ನು ಸಿಂಡಿಕೇಟ್ ಸದಸ್ಯರನ್ನಾಗಿಸಬೇಕು ಎಂದು ಒತ್ತಾಯಿಸಿ ನಗರದ ಮಾಜಿ ಸಿಂಡಿಕೇಟ್ ಸದಸ್ಯರ ನಿಯೋಗ ವಿಶ್ವವಿದ್ಯಾಲಯದ ಕುಲಸಚಿವರನ್ನು ಭೇಟಿ ಮಾಡಿ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಕಳಿಸಿಕೊಟ್ಟಿತು.ಸರ್ಕಾರ ಇತ್ತೀಚೆಗೆ ಬಳ್ಳಾರಿಯ ವಿಶ್ವವಿದ್ಯಾಲಯಕ್ಕೆ ಆರು ಸಿಂಡಿಕೇಟ್ ಸದಸ್ಯರನ್ನು ನಾಮಕರಣ ಮಾಡಿದೆ. ಅದರಲ್ಲಿ ಐದು ಜನರು ಬಳ್ಳಾರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರ ಜಿಲ್ಲೆಯವರಾಗಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆಯ ಒಬ್ಬರು ಮಾತ್ರ ಸಿಂಡಿಕೇಟ್ ಗೆ ನೇಮಕಗೊಂಡಿದ್ದಾರೆ. ಈ ನೇಮಕ ಪ್ರಕ್ರಿಯೆ ಸರಿಯಾದುದಲ್ಲ. ಕೂಡಲೇ 5 ಸದಸ್ಯರನ್ನು ತಕ್ಷಣ ಸರ್ಕಾರ ಬದಲಾಯಿಸಿ ಅಖಂಡ ಬಳ್ಳಾರಿ ಜಿಲ್ಲೆಯ ಅರ್ಹರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿತು.
ಮೊದಮೊದಲು ಬಳ್ಳಾರಿ ಜಿಲ್ಲೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು. ನಂತರ ಕರ್ನಾಟಕ ವಿಶ್ವವಿದ್ಯಾಲಯ, ಬಳಿಕ ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿತು. ಪ್ರಸ್ತುತ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವವಿದ್ಯಾಲಯದ ಆಡಳಿತದಲ್ಲಿ ಸ್ಥಳೀಯರೇ ಇದ್ದರೆ ವಿಶ್ವವಿದ್ಯಾಲಯದ ಅಭಿವೃದ್ಧಿ ಪೂರಕವಾಗಿ ಶ್ರಮಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಟ್ಟು 79 ಕಾಲೇಜುಗಳು ಬರುತ್ತಿದ್ದು ಬಳ್ಳಾರಿ ನಗರ ಒಂದರಲ್ಲಿ 19 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಪರಿಸ್ಥಿತಿ ಹೀಗಿದ್ದರೂ ಬಳ್ಳಾರಿ ನಗರದಿಂದಾಗಲೀ ಜಿಲ್ಲೆಯಿಂದ ಹೆಚ್ಚು ಜನ ಸಿಂಡಿಕೇಟ್ ಸದಸ್ಯರು ನೇಮಕ ಆಗದಿರುವುದು ತೀವ್ರ ಬೇಸರ ಮೂಡಿಸಿದೆ.
ರಾಜ್ಯಪಾಲರು ಹಾಗೂ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಅಖಂಡ ಜಿಲ್ಲೆಯವರಿಗೆ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ನಿಯೋಗದಲ್ಲಿ ಮಾಜಿ ಸಿಂಡಿಕೇಟ್ ಸದಸ್ಯರಾದ ಕೆ.ಎಂ.ಮಹೇಶ್ವರಸ್ವಾಮಿ, ಎಚ್.ಜಯಪ್ರಕಾಶ್ ಗೌಡ, ಕೆ.ತಿಪ್ಪೇಸ್ವಾಮಿ, ಮರ್ಚೆಡ್ ಮಲ್ಲಿಕಾರ್ಜುನಗೌಡ,
ವಿ.ಎಸ್. ಪ್ರಭಯ್ಯಸ್ವಾಮಿ, ನಿಷ್ಠಿ ರುದ್ರಪ್ಪ, ಸಿ.ಮಂಜುನಾಥ, ಕಸಾಪದ ಬಸವರಾಜ್ ಗದಗಿನ್ ಇದ್ದರು. ಕುಲಸಚಿವ ಎಸ್.ಎನ್.ರುದ್ರೇಶ್ ಮನವಿ ಸ್ವೀಕರಿಸಿದರು.ಬಳ್ಳಾರಿ ವಿವಿಗೆ ಜಿಲ್ಲೆಯವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿ ಮಾಜಿ ಸಿಂಡಿಕೇಟ್ ಸದಸ್ಯರ ನಿಯೋಗ ಕುಲಸಚಿವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.