ಸಾರಾಂಶ
ತುರುವೇಕೆರೆ: ಮೊದಲು ನಾಯಿ ಕಾಟ ತಪ್ಪಿಸಿ. ನಾವು ಜನರಿಂದ ಬೈಯ್ಯಿಸಿಕೊಳ್ಳಕ್ಕೆ ಆಗ್ತಾ ಇಲ್ಲ. ಮೊದಲು ಅದಕ್ಕೇನಾದರೂ ವ್ಯವಸ್ಥೆ ಮಾಡಿ ಎಂದು ಪಟ್ಟಣ ಪಂಚಾಯ್ತಿಯ ಸದಸ್ಯರು ಪಕ್ಷಾತೀತವಾಗಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಗ್ರಹಿಸಿದ ಘಟನೆ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.
ತುರುವೇಕೆರೆ: ಮೊದಲು ನಾಯಿ ಕಾಟ ತಪ್ಪಿಸಿ. ನಾವು ಜನರಿಂದ ಬೈಯ್ಯಿಸಿಕೊಳ್ಳಕ್ಕೆ ಆಗ್ತಾ ಇಲ್ಲ. ಮೊದಲು ಅದಕ್ಕೇನಾದರೂ ವ್ಯವಸ್ಥೆ ಮಾಡಿ ಎಂದು ಪಟ್ಟಣ ಪಂಚಾಯ್ತಿಯ ಸದಸ್ಯರು ಪಕ್ಷಾತೀತವಾಗಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಗ್ರಹಿಸಿದ ಘಟನೆ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು. ಪಟ್ಟಣ ಪಂಚಾಯ್ತಿಯ ಅಧ್ಯಕ್ಷೆ ಆಶಾರಾಣಿ ರಾಜಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಪಟ್ಟಣದಲ್ಲಿ ಆಗುತ್ತಿರುವ ನಾಯಿ ಹಾವಳಿಯನ್ನು ವಿವರಿಸಿದರು.
ಪ್ರತಿದಿನ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕನಿಷ್ಠ ೨೦ ಮಂದಿ ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆಂದು ಬರುತ್ತಿದ್ದಾರೆ. ಪಟ್ಟಣದಲ್ಲಿ ಸುಮಾರು 600ಕ್ಕೂ ಹೆಚ್ಚು ನಾಯಿಗಳಿವೆ. ಶಾಲಾ- ಕಾಲೇಜುಗಳ ಬಳಿ ಅಡ್ಡಾಡುವ ನಾಯಿಗಳು ಮಕ್ಕಳನ್ನು ಗುರಿಯಾಗಿಸಿಕೊಂಡು ಕಡಿಯುತ್ತಿವೆ. ಮಾಂಸದಂಗಡಿಗಳ ಮುಂದೆ ಹತ್ತಾರು ನಾಯಿಗಳು ಬಿಡಾರ ಹೂಡುತ್ತಿವೆ. ಸಾರ್ವಜನಿಕರು ದ್ವಿಚಕ್ರ ವಾಹನಗಳಲ್ಲಿ ಓಡಾಡಲೂ ಸಹ ಭಯವಾಗುತ್ತಿದೆ. ಅಟ್ಟಾಡಿಸಿಕೊಂಡು ಹೋಗುತ್ತಿವೆ. ಇದರಿಂದಾಗಿ ಅನಾಹುತಗಳೂ ಆಗುತ್ತಿವೆ. ಜನರು ನಮ್ಮನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ನಮ್ಮಿಂದ ಬೈಸಿಕೊಳ್ಳಲು ಸಾಧ್ಯವಿಲ್ಲ. ಪ್ರಾಣಾಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡರೆ ಎಲ್ಲರಿಗೂ ಕ್ಷೇಮ. ಹಾಗಾಗಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸದಸ್ಯರು ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಭಾಗ್ಯಮ್ಮ ಮಹೇಶ್, ಸದಸ್ಯರಾದ ಎನ್.ಆರ್.ಸುರೇಶ್, ಆಂಜನ್ ಕುಮಾರ್, ಯಜಮನ್ ಮಹೇಶ್, ಪ್ರಭಾಕರ್, ಮಧು, ರವಿಕುಮಾರ್, ಜಯ್ಯಮ್ಮ, ಚಿದಾನಂದ್, ನದೀಂ, ನಾಮಿನಿ ಸದಸ್ಯರಾದ ರುದ್ರೇಶ್, ಶ್ರೀನಿವಾಸ್ ಮೂರ್ತಿ, ಪಟ್ಟಣ ಪಂಚಾಯ್ತಿಯ ಆಹಾರ ನಿರೀಕ್ಷಕ ರಂಗನಾಥ್, ಸದಾನಂದ್ ಮತ್ತಿತರರಿದ್ದರು.