ಸಾರಾಂಶ
ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಸ್ಮಶಾನ ಜಮೀನನ್ನು ಕೆಎಸ್‌ಐಐಡಿಸಿ ಇಲಾಖೆಗೆ ಕೊಟ್ಟಿರುವುದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಕಾರ್ಯದರ್ಶಿ ಕರೆಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಿಪಿಎಂ ಸಂಘಟನೆಯ ತಾಲೂಕು ಘಟಕದ ಕಾರ್ಯದರ್ಶಿ ಎ.ಸ್ವಾಮಿ, ಗ್ರಾಮದ ಸರ್ವೆ ನಂ.೧೯೦ರಲ್ಲಿ ೧.೩೫ ಎಕರೆ ಜಮೀನು ಪುರಾತನ ಕಾಲದಿಂದಲೂ ರುದ್ರಭೂಮಿಯಾಗಿದೆ. ಗ್ರಾಮದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಎಲ್ಲ ಹಿಂದುಳಿದ ವರ್ಗಗಳ ಎಲ್ಲ ಜನಾಂಗದವರಿಗೂ ಇದು ರುದ್ರಭೂಮಿಯಾಗಿದೆ. ೨೦೦೬ ರಿಂದ ಈ ಜಮೀನಿನ ಪಹಣಿಯಲ್ಲಿ ಜಮೀನು ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಎಂದು ನಮೂದಿಸಲಾಗಿದೆ ಎಂದು ದೂರಿದರು.ಇದನ್ನು ರುದ್ರಭೂಮಿಯಾಗಿ ಪಹಣಿಯಲ್ಲಿ ನೋಂದಾಯಿಸಲು ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಪಹಣಿ ಬದಲಾಗಿಲ್ಲ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಎಂದೇ ಪಹಣಿಯಲ್ಲಿ ನೋಂದಾಯಿಸಲಾಗಿದೆ. ಗ್ರಾಮದಲ್ಲಿ ೧೬೦೦೦ ಜನಸಂಖ್ಯೆ ಇದೆ. ಇರುವ ಸ್ಮಶಾನ ಜಾಗವನ್ನು ಸರ್ಕಾರದ ಸಂಸ್ಥೆಯಿಂದಲೇ ಒತ್ತುವರಿ ಮಾಡಲಾಗಿದೆ. ಇದೀಗ ಸ್ಮಶಾನ ಜಾಗದಲ್ಲಿಯೇ ಕೆಆರ್‌ಐಡಿಎಲ್ ಇಲಾಖೆ ಮೂಲಕ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲಾಗುತ್ತಿದೆ. ರುದ್ರಭೂಮಿಗಳ ಕುರಿತಂತೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಅತಿಕ್ರಮಣ ಮಾಡಲಾಗುತ್ತಿದೆ. ಕೂಡಲೇ ರುದ್ರಭೂಮಿಯಲ್ಲಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕರ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ, ಅದನ್ನು ಬೇರೆಡೆ ಸ್ಥಳಾಂತರಿಸಬೇಕು. ಪಹಣಿಯಲ್ಲಿ ಈ ಪ್ರದೇಶವನ್ನು ರುದ್ರಭೂಮಿ ಎಂದು ನಮೂದಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಸದಸ್ಯ ನಾಗಭೂಷಣ ಉಪಸ್ಥಿತರಿದ್ದರು.