ಮಾಜಿ ದೇವದಾಸಿಯರ ಬೇಡಿಕೆ ಈಡೇರಿಸಲು ಒತ್ತಾಯ

| Published : Sep 11 2024, 01:03 AM IST

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೂವಿನಹಡಗಲಿ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ಹೂವಿನಹಡಗಲಿ: ಮಾಜಿ ದೇವದಾಸಿಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ನೂರಾರು ಬಾರಿ ಪ್ರತಿಭಟನೆ ಮಾಡಿ ಸರ್ಕಾರ ಗಮನ ಸೆಳೆದರೂ ಯಾರು ಗಮನಿಸದೇ ಮುಡಾ ಹಗರಣ ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ ಆರೋಪಿಸಿದರು.

ಇಲ್ಲಿನ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಚಿವರಿಗೆ, ಶಾಸಕರಿಗೆ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಬೇಕಾಗಿಲ್ಲ. ಇವರು ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಎದುರು ನೋಡುತ್ತಿರುವ ಇವರು, ಸಿಎಂ ಚೇರ್‌ ಮೇಲೆ ನಾ ಮುಂದು, ತಾ ಮುಂದು ಎಂದು ಟವಲ್‌ ಹಾಕುತ್ತಿದ್ದಾರೆ. ಇಂಥವರು ಯಾವ ಸಂದರ್ಭದಲ್ಲಿಯೂ ಅಧಿವೇಶನದಲ್ಲಿ ಮಾಜಿ ದೇವದಾಸಿಯರ ಸಮಸ್ಯೆಗಳ ಕುರಿತು ಚರ್ಚಿಸುತ್ತಿಲ್ಲ, ಕೋಮುವಾದಿ ಬಿಜೆಪಿ ಸರ್ಕಾರ ಕಿತ್ತು ಹಾಕಿ ಕಾಂಗ್ರೆಸ್‌ ಸರ್ಕಾರ ಬರಲು ನಾವೆಲ್ಲ ಬೆಂಬಲಿಸಿದ್ದರೂ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ಮಾಜಿ ದೇವದಾಸಿಯರಿಗೆ ಈ ವರೆಗೂ ಸರ್ಕಾರ ಮನೆ ನೀಡುತ್ತಿಲ್ಲ, ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳಿಲ್ಲ. ಇವರ ಜೀವನಕ್ಕಾಗಿ ಭೂಮಿ ನೀಡಬೇಕೆಂದು ಆದೇಶವಿದ್ದರೂ, ಈ ವರೆಗೂ ಯಾರಿಗೂ ಭೂಮಿ ಮಂಜೂರು ಮಾಡಿಲ್ಲ. ಮುಂಬರುವ ದಿನಗಳಲ್ಲಿ ದೇವದಾಸಿಯರ ಸಮಸ್ಯೆಗಳನ್ನು ಬಗೆ ಹರಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಒಕ್ಕೂಟದ ಜಿಲ್ಲಾಧ್ಯಕ್ಷೆ ಕೆ.ರೇಣುಕಾ ಮಾತನಾಡಿ, ಮಾಜಿ ದೇವದಾಸಿಯರಿಗೆ ನೀಡುವ ಮಾಶಾಸನ 10ನೇ ತಾರೀಖಿನೊಳಗ ಬಿಡುಗಡೆ ಮಾಡಬೇಕು. ಕನಿಷ್ಠ ₹5 ಸಾವಿರ ನೀಡಬೇಕಿದೆ. ದೇವದಾಸಿಯರ ಮಕ್ಕಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕಿದೆ. ಕೆಲ ಇಲಾಖೆಗಳಲ್ಲಿ ದೇವದಾಸಿಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಸುರೇಶ ಹಲಗಿ ಮಾತನಾಡಿ, ದೇವದಾಸಿಯರಿಗೆ ಕಾಂಗ್ರೆಸ್‌ ಸರ್ಕಾರ ₹1 ಲಕ್ಷದ ವರೆಗೂ ಸಹಾಯಧನ ನೀಡುತ್ತಿತ್ತು. ಆದರೆ, ಬಿಜೆಪಿ ಸರ್ಕಾರ 30 ಸಾವಿರಕ್ಕೆ ಖಡಿತ ಮಾಡಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಸಹಾಯಧನವನ್ನು ಹೆಚ್ಚಳ ಮಾಡಬೇಕಿದೆ.

ದೇವದಾಸಿಯರ ಮಕ್ಕಳಿಗೆ ಜೀವನೋಪಾಯಕ್ಕಾಗಿ ಮತ್ತು ಶಿಕ್ಷಣಕ್ಕೆ ನಿಗಮ ಮಂಡಳಿಯಲ್ಲಿ ಹಣವನ್ನು ಮೀಸಲು ಇಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕಾಧ್ಯಕ್ಷೆ ದಂಡೆಮ್ಮ, ಅಖಿಲ ಭಾರತ ಕಿಸಾನ್‌ ಸಭಾ ಅಧ್ಯಕ್ಷ ಡಿ. ಮುಕುಂದಗೌಡ, ಎಐಎಸ್‌ಎಫ್‌ನ ಬಸವರಾಜ ಸಂಶಿ, ಫಕ್ಕೀರವ್ವ, ಫಾತೀಮಾ, ನಿರ್ಮಲಾ ಸೇರಿದಂತೆ 50ಕ್ಕೂ ಹೆಚ್ಚು ಮಾಜಿ ದೇವದಾಸಿಯರು ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ ಅವರಿಗೆ ಮನವಿ ಪತ್ರ ಸಲ್ಲಿಸಿದರು.