ಜಿಗಜಿಣಗಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲು ಒತ್ತಾಯ

| Published : Jun 21 2024, 01:00 AM IST

ಸಾರಾಂಶ

ಏಳು ಬಾರಿ ಆಯ್ಕೆಯಾಗಿ, ಯಾವ ಹಗರಣದಲ್ಲಿಯೂ ಇಲ್ಲ ರಮೇಶ: ಮಕಣಾಪೂರ ಸೇರಿ ಹಲವರ ಆಗ್ರಹ

ಕನ್ನಡಪ್ರಭ ವಾರ್ತೆ ಚಡಚಣ

ಸಂಸದ ರಮೇಶ ಜಿಗಜಣಗಿ ಅವರನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ನಾಗಠಾಣ ಮತಕ್ಷೇತ್ರದ ಬಿಜೆಪಿ ಮುಖಂಡ ಶಿವಾನಂದ ಮಕಣಾಪೂರ ಒತ್ತಾಯಿಸಿದ್ದಾರೆ.

ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿ, ಸಂಸದರಾಗಿ ಏಳು ಬಾರಿ ಆಯ್ಕೆಯಾಗಿ ಸತತ 40 ರಿಂದ 50 ವರ್ಷಗಳ ಸಾರ್ವಜನಿಕ ವಲಯದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೇ, ಯಾವ ಹಗರಣ ಇಲ್ಲದೇ ಸಚಿವರಾಗಿ, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಷ್ಟ್ರದಲ್ಲಿ ನರೇಂದ್ರ ಮೋದಿಯವರ ಆಡಳಿತ ಪರ್ವ ಮತ್ತೆ ಆರಂಭಗೊಂಡಿದ್ದು, ರಾಷ್ಟ್ರದ ಅಭಿವೃದ್ಧಿಯಲ್ಲಿ ನರೇಂದ್ರ ಮೋದಿಯವರು ಈ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಿರುವ ಕಾರ್ಯಕ್ಕೆ ರಾಜ್ಯದ ಮತದಾರರು ಮನಸೋತು ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರಕ್ಕೆ 19 ಸಂಸದರ ಸ್ಥಾನ ಆಯ್ಕೆ ಮಾಡಿದ್ದಾರೆ ಎಂದರು.

ರೈತರು ಮತ್ತು ಎಲ್ಲ ವರ್ಗದವರ ಏಳಿಗೆಗೆ ಪೂರಕವಾದ ಯೋಜನೆಗಳು ಈ ಅವಧಿಯಲ್ಲಿ ಅಸ್ತಿತ್ವಕ್ಕೆ ಬರಲಿವೆ. ಸಾಮಾಜಿಕ ನ್ಯಾಯದಡಿ ರಾಜ್ಯಕ್ಕೆ ಸಚಿವ ಸ್ಥಾನ ನೀಡುವಲ್ಲಿ ಇನ್ನೂ ಅವಕಾಶಗಳಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಂಸದರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯದ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಗಾಗಿ ಸಂಸದ ರಮೇಶ ಜಿಗಜಣಗಿ ಅವರನ್ನು ಕ್ಯಾಬಿನೆಟ್‌ ದರ್ಜೆಯ ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂದು ತಾ.ಪಂ ಮಾಜಿ ಸದಸ್ಯ ರಾಜು ಸಾಹುಕಾರ ಝಳಕಿ, ಬಿಜೆಪಿ ಮುಖಂಡರಾದ ಸಿದ್ದರಾಮ ಬಗಲಿ, ರಮೇಶ ಜಿತ್ತಿ, ಸಿದ್ದಾರಾಮ ಕೊಟ್ಟಲಗಿ, ಅಶೋಕ ಏಳಗಿ, ವೀರೇಶ ಕಲ್ಯಣಶೆಟ್ಟಿ, ಗುಂಡು ಸಾವಳಗಿ, ಮಹಾದೇವ ನಾಗರೆ, ಸುಧಾಕರ ತುಪ್ಪದ, ಹಾಗೂ ಮಂಜುನಾಥ ಒತ್ತಾಯಿಸಿದ್ದಾರೆ.