ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಒತ್ತಾಯ

| Published : Sep 02 2024, 02:08 AM IST

ಸಾರಾಂಶ

ನಾಮಫಲಕಗಳಲ್ಲಿ ಅಂಗಡಿಕಾರರು ಅನ್ಯ ಭಾಷೆಗೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ.

ಬಳ್ಳಾರಿ: ಜಿಲ್ಲೆಯ ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಅಂಗಡಿಕಾರರು ಅನ್ಯ ಭಾಷೆಗೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಅದೇ ರೀತಿ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡೆಗಣಿಸಲಾಗಿದೆ.

ಕರ್ನಾಟಕ ಸರ್ಕಾರದ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದ ಕಾನೂನಿನಂತೆ ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು ಎಂಬ ಕಾನೂನು ಇದೆ. ಆದಾಗ್ಯೂ ಕನ್ನಡ ನಾಮಫಲಕಗಳ ಅನುಷ್ಠಾನದ ಬಗ್ಗೆ ಹಾಗೂ ಕನ್ನಡ ಭಾಷೆ ನಿರ್ಲಕ್ಷಿಸಿದವರ ವಿರುದ್ಧ ಯಾವುದೇ ಕ್ರಮಗಳಾಗಿಲ್ಲ ಎಂದು ಲೇಖಕರು, ಕನ್ನಡಪರ ಹೋರಾಟಗಾರರು ಹಾಗೂ ಸಾಹಿತ್ಯ ಪರಿಷತ್ತಿನ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಚರ್ಚಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕೋಶಾಧ್ಯಕ್ಷ ಡಾ. ಬಸವರಾಜ ಗದಗಿನ, ನಗರ ಘಟಕ ಅಧ್ಯಕ್ಷ ಕೆ.ವಿ. ನಾಗರೆಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಎರ್ರಿಸ್ವಾಮಿ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಮುದ್ದಟನೂರು ಎಚ್‌. ತಿಪ್ಪೇಸ್ವಾಮಿ, ಲೇಖಕ ವೀರೇಂದ್ರ ರಾವಿಹಾಳ್, ದಸ್ತಗೀರ್ ಸಾಬ್‌ ದಿನ್ನಿ, ಗಂಗಾವತಿ ವೀರೇಶ್, ಕೋರಿ ವಿರೂಪಾಕ್ಷಪ್ಪ, ಪುರುಷೋತ್ತಮ ಹಂದಿಹಾಳು, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್ ಕಪ್ಪಗಲ್, ಕನ್ನಡ ಪರ ಸಂಘಟನೆಗಳ ಮುಖಂಡರಾದ ಅಂಗಡಿ ಶಂಕರ್, ರಾಜು ಒಡೆಯರ್, ಸಿದ್ಮಲ್ ಮಂಜುನಾಥ, ಮುಂಡಾಸದ ಮಲ್ಲಿಕಾರ್ಜುನ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ ಹಾಗೂ ಕಸಾಪ ಜಿಲ್ಲಾ ಘಟಕದ ಸದಸ್ಯರು ಭಾಗವಹಿಸಿದ್ದರು.