ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರಿಗೆ ಒತ್ತಡ ತರಲು ಮುಸ್ಲಿಂ ಬಾಂಧವರು ಸಿದ್ಧತೆ ನಡೆಸಿದ್ದಾರೆ.ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ನಡೆದ ಅಂಜುಮನ್ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ- ಧಾರವಾಡ ಸಭೆಯಲ್ಲಿ ಸೇರಿದ 300ಕ್ಕೂ ಅಧಿಕ ಮುಸ್ಲಿಂ ಮುಖಂಡರು ಒಮ್ಮತದ ಈ ನಿರ್ಣಯ ಕೈಗೊಂಡರು.
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದ ಯಾಸೀರ ಅಹ್ಮದ ಖಾನ್ ಪಠಾಣ್ ಸೋಲು ಕಂಡಿದ್ದರು. ಕೆಲ ದಿನಗಳ ಹಿಂದೆ ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಈಗ ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಯನ್ನು ಕಾಂಗ್ರೆಸ್ ಭರ್ಜರಿಯಾಗಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.ಈಗಾಗಲೇ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೂರ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಕಳೆದ 15 ದಿನಗಳಿಂದ 2 ಹಂತದ ಸಭೆಗಳನ್ನು ನಡೆಸಲಾಗಿದ್ದು, ಭಾನುವಾರ ಖಾಸಗಿ ಹೊಟೇಲ್‌ನಲ್ಲಿ ಮೂರನೇ ಹಂತದ ಸಭೆ ಕರೆದು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಶಿಗ್ಗಾಂವಿ ಮತಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವಿ, ಸವಣೂರು, ತಡಸ, ಬಂಕಾಪುರ, ಹುಲಗೂರ ಸೇರಿದಂತೆ 12ಕ್ಕೂ ಅಧಿಕ ಅಂಜುಮನ್ ಇಸ್ಲಾಂ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಮುಖಂಡರು ಪಾಲ್ಗೊಂಡು ಸಮಾಲೋಚನೆ ನಡೆಸಿದರು. ಕೊನೆಗೆ ಸಮಾಜದ ಯಾವುದೇ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿದರೆ ಎಲ್ಲರೂ ಒಂದಾಗಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ನಿರ್ಣಯ ಕೈಗೊಳ್ಳಲಾಯಿತು. ಹಾಗೂ ಶಿಗ್ಗಾಂವಿ ಕ್ಷೇತ್ರಕ್ಕೆ ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ನಿಯೋಗ ತಗೆದುಕೊಂಡು ಹೋಗಿ ಒತ್ತಡ ಹಾಕಲು ನಿರ್ಧರಿಸಲಾಯಿತು.ಸಭೆಯ ನಂತರ ಮಾತನಾಡಿದ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ 1972ರಿಂದ ಮುಸಲ್ಮಾನ ಬಾಂಧವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತ ಬಂದಿದೆ. ಕಳೆದ 2-3 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದನ್ನು ಹೊರತು ಪಡಿಸಿದರೆ ಪ್ರತಿ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಶಿಗ್ಗಾಂವಿ ಮತಕ್ಷೇತ್ರದಲ್ಲಿ 70 ಸಾವಿರಕ್ಕೂ ಅಧಿಕ ಮುಸ್ಲಿಂ ಬಾಂಧವರ ಮತಗಳಿವೆ. ಈಗಾಗಲೇ ಇಲ್ಲಿ ಅನ್ಯ ಸಮಾಜ ಬಾಂಧವರಿಗೆ ಟಿಕೆಟ್ ನೀಡುವಂತೆ ಕೆಲವರು ಪಕ್ಷದ ವರಿಷ್ಠರಿಗೆ ಒತ್ತಡ ತಂದಿರುವ ಕುರಿತು ಗಮನಕ್ಕೆ ಬಂದಿದೆ. ಈಗಾಗಲೇ ಶಿಗ್ಗಾಂವಿ ಮತಕ್ಷೇತ್ರದ ಮುಸ್ಲಿಂ ಬಾಂಧವರು ನಮ್ಮ ಬಳಿ ಬಂದು ಚರ್ಚಿಸಿ ಅಂಜುಮನ್ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಸಭೆ ಕರೆದು ಒಮ್ಮತದ ನಿರ್ಣಯ ಕೈಗೊಳ್ಳುವಂತೆ ಅಲ್ಲಿನ ಜನರು ಮನವಿ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ 2 ಸಭೆಗಳನ್ನು ಮಾಡಲಾಗಿದೆ. ಭಾನುವಾರ 3ನೇ ಸಭೆ ಮಾಡಿ ಅಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.ಶಿಗ್ಗಾಂವಿ ಮತಕ್ಷೇತ್ರದ ಸಮಾಜ ಬಾಂಧವರು ಸಲ್ಲಿಸಿದ ಬೇಡಿಕೆ, ಹಕ್ಕೊತ್ತಾಯವನ್ನು ಕಾಂಗ್ರೆಸ್ ವರಿಷ್ಠರಿಗೆ ಮುಟ್ಟಿಸುವ ಕಾರ್ಯವನ್ನು ಅಂಜುಮನ್ ಇಸ್ಲಾಂ ಕಮಿಟಿ ಹುಬ್ಬಳ್ಳಿ-ಧಾರವಾಡ ನೇತೃತ್ವದಲ್ಲಿ ಮಾಡಲಾಗುವುದು. ಈಗಾಗಲೇ ಸಮಾಜದ 4ಕ್ಕೂ ಅಧಿಕ ಜನ ಆಕಾಂಕ್ಷಿಗಳಿದ್ದು, ಅವರಲ್ಲಿ ಯಾರು ಸೂಕ್ತ ಅಭ್ಯರ್ಥಿ ಎಂದು ಪಕ್ಷದ ಹೈಕಮಾಂಡ್ ಗುರುತಿಸಿ ಟಿಕೆಟ್ ನೀಡಿದರೆ ಸಮಾಜದ ಎಲ್ಲ ಬಾಂಧವರು ಒಗ್ಗಟ್ಟಿನಿಂದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಯಾರನ್ನು ಚುನಾವಣಾ ಕಣಕ್ಕೆ ಇಳಿಸಬೇಕು ಎಂಬುದರ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮುಸ್ಲಿಮರಿಗೆ ಶಿಗ್ಗಾಂವಿ ಮತಕ್ಷೇತ್ರದ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ನಿಯೋಗ ತೆಗೆದುಕೊಂಡು ಹೋಗುವ ಕುರಿತು ಮಾತ್ರ ಚರ್ಚಿಸಲಾಗಿದೆ. ಮೊಹರಂ ಆನಂತರ ಶಿಗ್ಗಾಂವಿ ಹಾಗೂ ಹುಬ್ಬಳ್ಳಿ-ಧಾರವಾಡ ಮುಸ್ಲಿಂ ಮುಖಂಡರು ಸೇರಿ ರಾಜ್ಯದ ಹಾಗೂ ರಾಷ್ಟ್ರದ ವರಿಷ್ಠರಿಗೆ ಮನವರಿಕೆ ಮಾಡುವುದಾಗಿ ತಿಳಿಸಿದರು.ಬೆಳಗ್ಗೆ ನಡೆದ ಸಭೆಯಲ್ಲಿ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಅಕ್ಬಾಲ್ ಜಮಾದಾರ, ಹುಬ್ಬಳ್ಳಿಯ ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಕಾರ್ಯದರ್ಶಿ ಬಸೀರ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ ಬಂಕಾಪುರ, ಇರ್ಷಾದ ಬಳ್ಳಾರಿ, ನವೀದ ಮುಲ್ಲಾ, ಪಾಲಿಕೆಯ ಮಾಜಿ ಮೇಯರ್ ಐ.ಎಂ. ಜವಳಿ, ಪಾಲಿಕೆ ಸದಸ್ಯ ಇಲಿಯಾಸ ಮನಿಯಾರ, ಆರೀಫ ಭದ್ರಾಪುರ ಸೇರಿದಂತೆ 300ಕ್ಕೂ ಅಧಿಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.