ಬಿಸಿಯೂಟದ ವ್ಯವಸ್ಥೆ ಎನ್‌ಜಿಒಗೆ ವಹಿಸುವಂತೆ ಒತ್ತಾಯ

| Published : Oct 05 2024, 01:31 AM IST

ಸಾರಾಂಶ

ಬಿಸಿಯೂಟದ ವ್ಯವಸ್ಥೆಯನ್ನು ಎನ್‌ಜಿಒಗೆ ವಹಿಸಬೇಕು ಹಾಗೂ ಶಿಕ್ಷಕರ ಪತ್ತಿನ ಸಂಘದಲ್ಲಿ ಆಗಿರುವ ದೋಷಗಳನ್ನು ಜಿಲ್ಲಾಧಿಕಾರಿ ಮೂಲಕ ಪರಿಹರಿಸಿ ನಮಗೆ ಸಿಗಬೇಕಾದ ನ್ಯಾಯ ದೊರಕಿಸಿಕೊಡಬೇಕು ಎಂದು ಕುಷ್ಟಗಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಕುಷ್ಟಗಿ: ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಅವರಿಗೆ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಬಿಸಿಯೂಟದ ವ್ಯವಸ್ಥೆಯನ್ನು ಎನ್‌ಜಿಒಗೆ ವಹಿಸಬೇಕು ಹಾಗೂ ಶಿಕ್ಷಕರ ಪತ್ತಿನ ಸಂಘದಲ್ಲಿ ಆಗಿರುವ ದೋಷಗಳನ್ನು ಜಿಲ್ಲಾಧಿಕಾರಿ ಮೂಲಕ ಪರಿಹರಿಸಿ ನಮಗೆ ಸಿಗಬೇಕಾದ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ ಮಾತನಾಡಿ, ಸದ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಮೇಲೆ ಇರುವ ಬಿಸಿಯೂಟದ ಜವಾಬ್ದಾರಿ ಮುಕ್ತಿ ನೀಡಿ, ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಆ ಮೂಲಕ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಅನುವು ಮಾಡಿಕೊಡಬೇಕು. ಶಿಕ್ಷಕರ ಪತ್ತಿನ ಸಂಘದಲ್ಲಿ ಅನೇಕ ಲೋಪದೋಷಗಳು ಕಂಡುಬಂದಿದ್ದು, ಸಮರ್ಪಕವಾದ ಕಾರ್ಯಗಳು ನಡೆಯುತ್ತಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಮಾತನಾಡಿ, ಬಿಸಿಯೂಟದ ವ್ಯವಸ್ಥೆಯನ್ನು ಎನ್‌ಜಿಒಗೆ ವಹಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಸರ್ಕಾರದ ಗಮನಕ್ಕೆ ತರಲಾಗುವುದು. ಪತ್ತಿನ ಸಂಘದ ಸಮಸ್ಯೆಯನ್ನೂ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಇತರರು ಇದ್ದರು.