ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ರಾಜಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 10 ತಿಂಗಳಿಂದೇ ಅಡುಗೆ ಸಹಾಯಕಿ ನೇಮಕ ಮಾಡಿಕೊಳ್ಳಲು ಅರ್ಜಿ ಕರೆಯಲಾಗಿತ್ತು. ಈ ಹುದ್ದೆಗೆ ಇಬ್ಬರು ಎಸ್ಸಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ವಿಧವೆ ಮಹಿಳೆಗೆ ಮೊದಲ ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ದಲಿತ ಸೇನೆ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಉಮಕಾಂತ್ ಹಳ್ಳೆ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಹೊಸಮನಿ, ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕಿ ಹುದ್ದೆ ಖಾಲಿ ಇದ್ದು ಇದಕ್ಕೆ ಕಳೆದ 10 ತಿಂಗಳ ಹಿಂದೆ ಅರ್ಜಿ ಕರೆಯಲಾಗಿತ್ತು. ಈ ಹುದ್ದೆಗೆ 22 ವರ್ಷದ ಸುಷ್ಮಾ ಕಾಶಿನಾಥ ವಡ್ಡರ್ ಮತ್ತು 35 ವರ್ಷದ ವಿಧವೆ ಮಲ್ಲಮ್ಮ ನಿಂಗಯ್ಯ ಹರಿಜನ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ನಿಯಮಾನುಸಾರ ವಿಧವೆ ಮಹಿಳೆಗೆ ಮೊದಲ ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ ಎಂಬ ದುರುದ್ದೇಶದಿಂದ ಶಾಲಾ ಮುಖ್ಯ ಗುರುಗಳು ಎಸ್‌ಡಿಎಂಸಿ ಹಾಗೂ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕರು ಸೇರಿ ಕುಂಟು ನೆಪ ಹೇಳುತ್ತಾ ನೇಮಕಾತಿ ಮುಂದೂಡುತ್ತಾ ಬಂದಿದ್ದಾರೆ. ಈ ವಿಷಯದ ಬಗ್ಗೆ ಸಂಬಂಧಪಟ್ಟ ಎಲ್ಲಾ ಮೇಲಧಿಕಾರಿಗಳಿಗೆ, ಜಿಲ್ಲಾಧಿಕಾರಿಯವರೆಗೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೂ ನೇಮಕ ಮಾಡಿಕೊಳ್ಳದೆ ವಿನಾಕಾರಣ ದಿಂದ ಮುಂದೂಡುತ್ತಾ ಬಂದಿದ್ದಾರೆ. ಅಧಿಕಾರಿಗಳು ನಮ್ಮ ಸಮಯಕ್ಕೆ ಸ್ಪಂದಿಸದ ಕಾರಣ ನಾವು ಅನಿವಾರ್ಯವಾಗಿ ತಹಸೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.
ಈಗಾಗಲೇ ಸುಮಾರು ವರ್ಷದಿಂದ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕರು ಇಲ್ಲಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಅವ್ಯವಹಾರ ನಡೆಸಿರುವ ಸುದ್ದಿ ತಾಲೂಕಿನಲ್ಲಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಲ್ಲದೆ ಇವರ ಮೇಲೆ ಈಗ ತನಿಖೆಯೂ ನಡೆಯುತ್ತಿದೆ. ತನಿಖೆ ಮುಚ್ಚ ಹಾಕುವ ಹುನ್ನಾರ ನಡೆಸಿದ್ದಾರೆ. ಇಂಥ ಭ್ರಷ್ಟ ಅಧಿಕಾರಿ ವಿರುದ್ಧ ನಿವೃತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಕೂಡಲೇ ಇವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಸಾಕ್ಷಿ ನಾಶ ಮಾಡುವ ಸಂದರ್ಭ ಇದೆ. ಈಗ ಹಿಂದೆ ಕರೆದ ಅರ್ಜಿ ಬದಿಗಿಟ್ಟು ಈಗ ಮತ್ತೆ ಹೊಸ ಅರ್ಜಿ ಕರೆಯುವ ಹುನ್ನಾರ ನಡೆಸಿದ್ದಾರೆ. ಹೊಸ ಅರ್ಜಿ ಕರೆಯಲು ಆಸ್ಪದ ನೀಡದೆ ವಿಧವೆಯನ್ನು ಅಡುಗೆ ಸಹಾಯಕಿ ಎಂದು ನೇಮಕ ಮಾಡಿಕೊಳ್ಳುವವರಿಗೆ ನಮ್ಮ ಹೋರಾಟ ಮುಂದುವರೆದಿರುತ್ತದೆ ಎಂದವರು ಎಚ್ಚರಿಕೆ ನೀಡಿದರು.ಅಮರೇಶ ಬುದನೂರ, ಸಂತೋಷ ಯಕ್ತಾಪೂರ, ನಾಗರಾಜ ರಾಜಾಪುರ, ಮುತ್ತು ದೇವತಕಲ್, ಅಮರೇಶ ಗುಳಬಾಳ, ಮರಲಿಂಗ ಗುಡಿಮನಿ, ಮಹಿಬೂಬ ಹಂದ್ರಾಳ, ಮಹಾದೇವಪ್ಪ ಚಲವಾದಿ, ಜುಮ್ಮಣ್ಣ ಕಟ್ಟಿಮನಿ ಸೇರಿ ಕಾರ್ಯಕರ್ತರು ಇದ್ದರು.