ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಇಷ್ಟೊತ್ತಿಗಾಗಲೇ ಜಿಪಂ, ತಾಪಂ ಚುನಾವಣೆಯನ್ನು ಸರ್ಕಾರ ಮಾಡಿ ಮುಗಿಸಬೇಕಿತ್ತು. ಆದರೆ ಸತ್ತ ಕಾಂಗ್ರೆಸ್ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಧೈರ್ಯ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಜಿಪಂ, ತಾಪಂ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಇಲ್ಲ. ಆದ್ದರಿಂದ ಅವರು ಚುನಾವಣೆಗಳನ್ನು ಮಾಡುತ್ತಿಲ್ಲ ಎಂದರು. ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸುತ್ತಾರೆ
ಸುಳ್ಳುಗಳನ್ನು ಹೇಳಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್, ತಾಪಂ, ಜಿಪಂ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಸರ್ಕಾರದ ಅನೇಕ ಗ್ಯಾರೆಂಟಿಗಳು ಈಗಾಗಲೇ ಕಿತ್ತು ಹೋಗಿವೆ. ಚುನಾವಣೆ ನಡೆದರೆ ಜನ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸುತ್ತಾರೆ. ಆ ಕಾರಣಕ್ಕೆ ಚುನಾವಣೆ ನಡೆಸುತ್ತಿಲ್ಲ ಎಂದರು.ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿವೆ. ಬೇಸಿಗೆ ಬರುತ್ತಿದ್ದು, ಕುಡಿಯುವ ನೀರು ಕೊಡಲಿಕ್ಕೂ ಆಗುತ್ತಿಲ್ಲ. ಎಲ್ಲಾ ವಿಧದಲ್ಲೂ ಸರ್ಕಾರ ವಿಫಲವಾಗಿ ಕೇವಲ ಲೂಟಿ ಮಾಡಿ ಆಸ್ತಿ ಮಾಡುವುದರಲ್ಲಿ ಕಾಂಗ್ರೆಸ್ ನಾಯಕರು ಮುಳಗಿದ್ದಾರೆ. ಬೆಂಗಳೂರು ಸುತ್ತ ಮುತ್ತ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡುತ್ತಿದ್ದಾರೆ. ದೇವನಹಳ್ಳಿ, ಶಿಡ್ಲಘಟ್ಟ ಸುತ್ತಲೂ ಜಮೀನುಗಳನ್ನು ಖರೀದಿ ಮಾಡಿ ದುಡ್ಡು ಮಾಡುತ್ತಿದ್ದಾರೆಂದು ಆರೋಪಿಸಿದರು.
ಬ್ರ್ಯಾಂಡ್ ಹೋಯ್ತು, ಗ್ರೇಟರ್ ಬಂತುಗ್ರೇಟರ್ ಬೆಂಗಳೂರು ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ಹಿಂದೆ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆಂದರು. ಈಗ ಬ್ರ್ಯಾಂಡ್ ಬೆಂಗಳೂರು ಬಿಟ್ಟು ಗ್ರೇಟರ್ ಬೆಂಗಳೂರು ಮಾಡಲಿಕ್ಕೆ ಹೊರಟಿದ್ದಾರೆ. ಮೇಯ್ಯಲು ಏನು ಬೇಕೋ ಎಲ್ಲವನ್ನು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಿರ್ಲಜ್ಜ, ಸತ್ತ ಸರ್ಕಾರ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ , ನಗರಸಭೆ ಸದಸ್ಯ ನಾರಾಯಣ ಸ್ವಾಮಿ , ತಲದುಮ್ಮನ ಹಳ್ಳಿ ಮಧು, ಪುರುಪೋತ್ತಮ್ , ಜಪ್ತಿ ಹೊಸಹಳ್ಳಿ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ , ಮುಖಂಡರಾದ ಬಾಬು , ಮುನಿಯಪ್ಪ , ಮುನಿರಾಜು ಮತ್ತಿತರರು ಹಾಜರಿದ್ದರು.