ಸಾರಾಂಶ
ಹಾವೇರಿ: ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಖಾಸಗಿಕರಣಗೊಳಿಸುವುದನ್ನು ಕೈಬಿಡಬೇಕು, ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಿಸಿಯೂಟ ನೌಕರರು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಜಿಲ್ಲೆಯಲ್ಲಿ 2002- 03ರಿಂದ ಅಕ್ಷರ ದಾಸೋಹ ಬಿಸಿಯೂಟ ಜಾರಿಗೆ ಬಂದಿದ್ದು, 3900ಕ್ಕಿಂತಲೂ ಹೆಚ್ಚು ಬಿಸಿಯೂಟ ತಯಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತ ವೇತನ, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಆದಾಗ್ಯೂ ಇವರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ಸಾಗಿಸುವುದು ಅತ್ಯಂತ ಕಷ್ಟದಾಯಕವಾಗಿದೆ.
2003ರಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಸಲ ವೇತನ ಹೆಚ್ಚಿಸುವಂತೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವುಂತೆ ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಮಾಸಿಕ ₹6000 ವೇತನ ಮತ್ತು ನಿವೃತಿಯಾದವರಿಗೆ ₹2.5 ಲಕ್ಷ ಇಡಗಂಟು ಪಿಂಚಣಿ ನೀಡುವುದಾಗಿ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆಯುತ್ತಾ ಬಂದರೂ ಜಾರಿಗೆ ತಂದಿಲ್ಲ. ಈಗಲಾದರೂ 2025- 26ನೇ ಸಾಲಿನ ಬಜೆಟ್‌ನಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಜಿಲ್ಲಾ ಅಧ್ಯಕ್ಷ ಜಿ.ಡಿ. ಪೂಜಾರ, ರಾಜೇಶ್ವರಿ ದೊಡ್ಡಮನಿ, ನಿರ್ಮಲಾ ಬಂಕಾಪುರಮಠ, ಸರೋಜಮ್ಮ ಹೀರೆಮಠ, ಲತಾ ಹೀರೆಮಠ, ಮಹಾದೇವಿ ಬಂಡಿ, ರೇಖಮ್ಮ ದನ್ನೂರು, ಶೈಲಜಾ ಹರನಗಿರಿ ಸೇರಿದಂತೆ ನೂರಾರು ಬಿಸಿಯೂಟ ಕಾರ್ಯರ್ತೆಯರು ಪಾಲ್ಗೊಂಡಿದ್ದರು.
23ರಂದು ಅಕ್ಷರೋತ್ಸವ ಶೈಕ್ಷಣಿಕ ಸಮಾವೇಶಹಾವೇರಿ: ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಮೇಕ್ ವೆಲ್‌ಫೇರ್ ಫೌಂಡೇಶನ್ ಹತ್ತು ವರ್ಷ ಪೂರೈಸಿದ ಹಿನ್ನೆಲೆ ಜಿಲ್ಲೆಯ ಸವಣೂರು ತಾಲೂಕು ಕಳಲಕೊಂಡ ಗ್ರಾಮದ ಎಸ್‌ವಿಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ. 23ರಂದು ಸಂಜೆ 4ಕ್ಕೆ ಅಕ್ಷರೋತ್ಸವ ಎಂಬ ಶೈಕ್ಷಣಿಕ ಸಮಾವೇಶ ಹಮ್ಮಿಕೊಂಡಿದೆ ಎಂದು ಮೇಕ್ ವೆಲ್‌ಫೇರ್ ಫೌಂಡೇಶನ್ ವ್ಯವಸ್ಥಾಪಕ ಕೆ.ಎಂ. ಮುಸ್ತಫಾ ನಈಮಿ ಹಝ್ರತ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಪ್ರತಿಭಾ ಸಂಗಮವನ್ನು ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀಗಳು ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಮುಖ ಶಿಕ್ಷಣ ಸೇವಕರಿಗೆ ವಿವೇಕ ಅಕ್ಷರ ಪುರಸ್ಕಾರ ಪ್ರದಾನ ಮಾಡಲಿದ್ದಾರೆ ಎಂದರು.ಸೌದಿ ಅರೆಬಿಯಾದ ಸಿಇಒ ಅಲ್ ಮುಝೈನ್‌ನ ಬಜ್ಜೆ ಝಕರಿಯಾ ಅವರಿಗೆ ಅಕ್ಷರ ಅವಾರ್ಡ್ ನೀಡಿ ಗೌರವಿಸಲಾಗುತ್ತದೆ. ಶಿಗ್ಗಾಂವಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ, ಸವಣೂರು ಪುರಸಭೆ ಅಧ್ಯಕ್ಷ ಅಲಾಹುದ್ದೀನ್ ಹಸನಮಿಯಾ ಮನಿಯಾರ್, ಜಲ್ಲಾಪುರ ಗ್ರಾಪಂ ಅಧ್ಯಕ್ಷ ಶಿವಬಸಪ್ಪ ಮತ್ತೂರ ಭಾಗವಹಿಸಲಿದ್ದಾರೆ ಎಂದರು.ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಮೇಕ್ ವೆಲ್‌ಫೇರ್ ಫೌಂಡೇಶನ್‌ನ ಅಕ್ಷರೋತ್ಸವ ಅಂಗವಾಗಿ ಫೆ. 21 ಮತ್ತು 22ರಂದು ಕಳಲಕೊಂಡ, ಜಲ್ಲಾಪುರ, ಮಂತ್ರೋಡಿ, ಕಮಲದೊಡ್ಡಿ ಸೇರಿದಂತೆ ಸುತ್ತಮುತ್ತಲಿನ 10 ಗ್ರಾಮಗಳಲ್ಲಿ ಅಕ್ಷರ ಸಂಚಾರ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ, ಮರಳಿಗೆ ಶಾಲೆಗೆ ಸೇರ್ಪಡೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಖಲಂದರ ಅಕ್ಕೂರ ಇದ್ದರು.