ಸಾರಾಂಶ
ಮದುವೆಯಾಗು ಎಂದು ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಗೆ ಕಿರಕುಳ ನೀಡಿದ ಪರಿಣಾಮ ಅವಳು, ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಕೆಎಂಸಿಆರ್‌ಐನಲ್ಲಿ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಹುಬ್ಬಳ್ಳಿ: ಮದುವೆಯಾಗು ಎಂದು ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಗೆ ಕಿರಕುಳ ನೀಡಿದ ಪರಿಣಾಮ ಅವಳು, ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಕೆಎಂಸಿಆರ್‌ಐನಲ್ಲಿ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ನೇಹಾ ಹತ್ಯೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕುಂದಗೋಳ ಪಟ್ಟಣದ ಸಿರಾಜ್ ಹಂಚಿನಾಳ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ವಿದ್ಯಾನಗರದ ಕಾಲೇಜೊಂದರಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ 20 ವರ್ಷದ ಯುವತಿ ಹಾಗೂ ಸಿರಾಜ್ ಪ್ರೀತಿಸುತ್ತಿದ್ದರು. ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಇಬ್ಬರ ಖಾಸಗಿ ಕ್ಷಣದ ಫೋಟೋ ಇಟ್ಟುಕೊಂಡಿದ್ದ ಸಿರಾಜ್, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ನಿತ್ಯ ಬ್ಲಾಕ್‌ಮೇಲ್ ಮಾಡಿ ಕಿರುಕುಳ ಕೊಡುತ್ತಿದ್ದನು ಎಂದು ಹೇಳಲಾಗಿದೆ.
ಕುಂದಗೋಳದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಇವರಿಬ್ಬರು ವಾಸಿಸುತ್ತಿದ್ದರು. ಮೊದಲು ಸ್ನೇಹಿತನಂತೆ ವರ್ತಿಸಿದ್ದ ಸಿರಾಜ್, ಬಳಿಕ ಸಲುಗೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿದ್ದಾನೆ ಎನ್ನಲಾಗಿದೆ. ಯುವತಿ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ರಂಜಾನ್ ಹಬ್ಬದಂದು ನಗರದಲ್ಲಿ ಯುವತಿಯ ಮೇಲೆ ಹಲ್ಲೆ ಕೂಡ ಮಾಡಿದ್ದನೆಂದು ತಿಳಿದು ಬಂದಿದೆ. ಸಿರಾಜ್ ಕಿರುಕುಳಕ್ಕೆ ಬೇಸತ್ತ ಯುವತಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ನಗರದ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಕಮೀಷನರ್ ಭೇಟಿ
ಕೆಎಂಸಿಆರ್‌ಐಗೆ ಭೇಟಿ ನೀಡಿದ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಯುವತಿಯ ಆರೋಗ್ಯ ವಿಚಾರಿಸಿ, ಯುವತಿಯ ಕುಟುಂಬಸ್ಥರಿಂದ ಪ್ರಕರಣದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮದುವೆಯಾಗುವಂತೆ ಪೀಡಿಸುತ್ತಿದ್ದ, ಅದಲ್ಲದೆ ಹಲ್ಲೆ ಮಾಡಿದ್ದ. ಹೀಗಾಗಿ ಕಿರುಕುಳ ನೀಡಿದ್ದ ಯುವಕ ಸಿರಾಜನನ್ನು ಬಂಧಿಸಲಾಗಿದ್ದು, ಸೂಕ್ತ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಲವ್ ಜಿಹಾದ್ ಆರೋಪ
ಇದೊಂದು ಲವ್ ಜಿಹಾದ್ ಪ್ರಕರಣವೆಂದು ಕೆಲ ಹಿಂದುಪರ ಸಂಘಟನೆಗಳು ಆರೋಪಿಸಿವೆ. ನೇಹಾ ಹಿರೇಮಠ ಪ್ರಕರಣದಲ್ಲಿ ಇದೇ ರೀತಿಯಾಗಿತ್ತು. ಇಲ್ಲಿಯೂ ಮದುವೆಯಾಗುವಂತೆ ಅನ್ಯ ಕೋಮಿನ ಯುವಕ ಕಿರುಕುಳ ನೀಡಿದ್ದನು. ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.