ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

| Published : Mar 21 2024, 01:03 AM IST

ಸಾರಾಂಶ

ನಗರಸಭೆಯ ಪೌರಾಯುಕ್ತರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ಪ್ರತಿ ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕು.

ಹೊಸಪೇಟೆ: ನಗರದ ನಿವಾಸಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಜಯನಗರ ನಾಗರಿಕ ವೇದಿಕೆ ಹಾಗೂ ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘಟನೆಯ ಪದಾಧಿಕಾರಿಗಳು ಬುಧವಾರ ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ವಿಜಯನಗರ ನಾಗರಿಕ ವೇದಿಕೆಯ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಹೊಸಪೇಟೆ ನಗರವು ಜಿಲ್ಲಾ ಕೇಂದ್ರವಾಗಿದ್ದು, ವಿಶ್ವಪಾರಂಪರಿಕ ತಾಣವಾದ ಹಂಪಿ ಹತ್ತಿರದಲ್ಲಿರುವುದರಿಂದ ಪ್ರವಾಸಿ ಕೇಂದ್ರವಾಗಿದೆ. ನಗರದ ನಾಗರಿಕರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.ಅರ್ಜಿದಾರರ ಮನವಿಗಳಿಗೆ ತ್ವರಿತ ಹಾಗೂ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸುವ ಜವಾಬ್ದಾರಿ ನಗರಸಭೆಯ ಮೇಲಿದೆ. ನಗರಸಭೆಯ ಪೌರಾಯುಕ್ತರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ಪ್ರತಿ ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕು. ಈಗಾಗಲೇ ರಾಜ್ಯ ಸರ್ಕಾರವು ಎಲ್ಲ ಜಿಲ್ಲಾಧಿಕಾರಿಗೆ ಆದೇಶ ನೀಡಿ ತಮ್ಮ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಕರೆಯುವ ಆದೇಶ ಹೊರಡಿಸಿದೆ. ಇದನ್ನು ಪಾಲನೆ ಮಾಡಬೇಕು ಎಂದರು.ಹಿರಿಯ ನಾಗರಿಕರು ಮತ್ತು ಮಹಿಳಾ ಅರ್ಜಿದಾರರ ಮನವಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಿಂಗಳಲ್ಲಿ ಎರಡು ದಿನ ಇವರ ಅರ್ಜಿಗಳಿಗೆ ವಿಶೇಷ ಆದ್ಯತೆ ನೀಡಿ ಕಡತ ವಿಲೇವಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ನಗರದಲ್ಲಿ ಫಾರಂ-3 ನವೀಕರಣ ಪ್ರತಿ ಅರ್ಜಿ ಸಲ್ಲಿಕೆಯನ್ನು ಸರಳಗೊಳಿಸಬೇಕು. ಫಾರಂ-3 ನವೀಕರಣ ಪ್ರತಿ ನೀಡಲು ಹೆಚ್ಚುವರಿಯಾಗಿ ಯಾವುದೇ ದಾಖಲೆಗಳನ್ನು ಕಡ್ಡಾಯಗೊಳಿಸಬಾರದು. ಮೊದಲ ಸಲ ಫಾರಂ-3 ಪ್ರತಿ ಕೊಡುವಾಗ ನಗರಸಭೆಗೆ ಸಲ್ಲಿಸಿದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಫಾರಂ-3 ನವೀಕರಣ ಪ್ರತಿ ಕೊಡಬೇಕೇ ಹೊರತು ಎರಡನೇ ಸಲ ಸಹ ಈ ಹಿಂದೆ ಸಲ್ಲಿಸಿದ ದಾಖಲೆಗಳನ್ನು ಲಗತ್ತಿಸುವ ವ್ಯವಸ್ಥೆ ಕೈಬಿಡಬೇಕು ಎಂದು ಆಗ್ರಹಿಸಿದರು.ನಗರದಲ್ಲಿ ಎಲ್ಲೆಂದರಲ್ಲಿ ಕಂಡ ಕಂಡ ಕಡೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಿ ಸ್ವಚ್ಛತೆ ಮತ್ತು ನೈರ್ಮಲ್ಯದ ಪರಿಸರ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಮುಖ ವೃತ್ತಗಳು ಹಾಗೂ ಅಗತ್ಯವಿರುವ ಕಡೆ ಮೂತ್ರಾಲಯಗಳ ನಿರ್ಮಾಣ ಮಾಡಬೇಕು ಎಂದರು.ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ತೆರಿಗೆ ಹಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ಸದ್ಬಳಕೆಯಾಗಬೇಕು. ಯಾವುದೇ ಕಾರಣಕ್ಕೆ ಕಳಪೆ ಕಾಮಗಾರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಯು.ಆಂಜನೇಯಲು, ಟಿ.ತಿಪ್ಪೇಸ್ವಾಮಿ, ಬಿ.ಜಹಾಂಗೀರ್, ಕೆ.ಕುಮಾರಸ್ವಾಮಿ, ನಜೀರಸಾಬ್, ಯು.ಅಶ್ವತ್ಥಪ್ಪ, ವಿರುಪಾಕ್ಷಪ್ಪ, ರಾಮಕೃಷ್ಣ, ಗೋಪಿನಾಥ, ರಾಮನಮಲಿ, ಕೊಟ್ರೇಶ್, ಮೊಹಮ್ಮದ್ ಬಾಷಾ, ಕೋತಿ ಕೊಟ್ರಪ್ಪ, ನೀಲಕಂಠ, ಎಂ.ಶಂಕ್ರಪ್ಪ, ಯಂಕಪ್ಪ, ಸಣ್ಣಕಾಶಿ, ಪ್ರಸಾದ್, ರಾಘವೇಂದ್ರ ಮತ್ತಿತರರಿದ್ದರು.