ಎಕರೆಗೆ ₹೨೫ ಸಾವಿರ ಬರ ಪರಿಹಾರ ನೀಡಲು ಒತ್ತಾಯ

| Published : Dec 15 2023, 01:30 AM IST

ಸಾರಾಂಶ

ತೀವ್ರ ಬರ ಎದುರಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಎಕರೆ ₹25 ಸಾವಿರದಂತೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು. ಗುರುವಾರ ಹಿರೇಕೆರೂರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಹಿರೇಕೆರೂರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಶತಮಾನದಲ್ಲಿ ಕಂಡರಿಯದ ಭೀಕರ ಬರಗಾಲಕ್ಕೆ ರೈತರು ತುತ್ತಾಗಿದ್ದಾರೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈ ಕೊಟ್ಟಿದೆ. ಮಳೆ ಕೈ ಕೊಟ್ಟ ಪರಿಣಾಮ ಸಾಲ ಮಾಡಿದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರಿಗೆ ಪರಿಹಾರ ಕೊಡುವುದು ನ್ಯಾಯಸಮ್ಮತವಾಗಿದೆ ಎಂದರು.

ಹಿರೇಕೆರೂರು: ತೀವ್ರ ಬರ ಎದುರಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಎಕರೆ ₹25 ಸಾವಿರದಂತೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಹಿರೇಕೆರೂರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಶತಮಾನದಲ್ಲಿ ಕಂಡರಿಯದ ಭೀಕರ ಬರಗಾಲಕ್ಕೆ ರೈತರು ತುತ್ತಾಗಿದ್ದಾರೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈ ಕೊಟ್ಟಿದೆ. ಮಳೆ ಕೈ ಕೊಟ್ಟ ಪರಿಣಾಮ ಸಾಲ ಮಾಡಿದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರಿಗೆ ಪರಿಹಾರ ಕೊಡುವುದು ನ್ಯಾಯಸಮ್ಮತವಾಗಿದೆ. ರೈತರಿಗೆ ಪರಿಹಾರ ನೀಡುವುದು ಭಿಕ್ಷೆಯಲ್ಲ ಎಂದು ಹೇಳಿದರು.ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಕೇಂದ್ರ ಸರ್ಕಾರ ಒಂದು ರು. ಸಹ ಬೆಳೆ ಪರಿಹಾರ ಕೊಟ್ಟಲ್ಲ. ರಾಜ್ಯ ಸರ್ಕಾರ ೧ ಹೆಕ್ಟೇರ್‌ಗೆ ₹೨ ಸಾವಿರ ಪರಿಹಾರ ಕೊಡುವುದಾಗಿ ಹೇಳಿಕೆ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿ. ದುಡಿಯುವ ರೈತರಿಗೆ ಪ್ರತಿ ಎಕರೆಗೆ ₹೨೫ ಸಾವಿರ ಬೆಳೆ ನಷ್ಟ ಪರಿಹಾರ ಕೊಡಬೇಕು. ಈ ಮೂಲಕ ರೈತರ ರಕ್ಷಣೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದ್ಯ ಕರ್ತವ್ಯ ಕಾನೂನು ಪ್ರಕಾರ ಪರಿಹಾರ ಒದಗಿಸಬೇಕು. ಕರ್ನಾಟಕದಲ್ಲಿ ೨೮ ಪಾಲಿಮೆಂಟ್ ಸದಸ್ಯರಿದ್ದು, ಬರಗಾಲದ ಬಗ್ಗೆ ಮಾತನಾಡದೆ ಕಾಲಹರಣ ಮಾಡುತ್ತಿರುವುದು ರೈತ ಕುಲಕ್ಕೆ ಅವಮಾನ ಎಸಗಿದಂತೆ. ತಾಲೂಕಿನ ರೈತರಿಗೆ ಪ್ರಸಕ್ತ ವರ್ಷದ ೨೫ ರಷ್ಟು ಮಧ್ಯಂತರ ಬೆಳೆ ವಿಮಾ ಪರಿಹಾರ ಮಂಜೂರಾಗಿದ್ದು ಸ್ವಾಗತಾರ್ಹವಾಗಿದ್ದು, ಉಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರ ತೋಟಗಾರಿಕೆ ಬೆಳೆಗೆ ಹನಿ ನೀರಾವರಿ ಡ್ರಿಪ್ ಬೆಲೆ ಹೆಚ್ಚಿಸಿದ್ದು ಹಾಗೂ ಹನಿ ನೀರಾವರಿ ಪಡೆದವರಿಗೆ ಸ್ಪ್ರಿಂಕ್ಲರ್ ಕೊಡಲು ಸಾಧ್ಯವಿಲ್ಲ ಎಂದು ಆದೇಶ ಮಾಡಿದೆ. ಬೆಲೆ ಹೆಚ್ಚು ಮಾಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಸ್ಪ್ರಿಂಕ್ಲರ್ ಪಡೆಯಲು ಈಗಿರುವ ಆದೇಶ ರದ್ದು ಮಾಡಬೇಕು. ಕಳೆದು ಮೂರು ವರ್ಷ ಅತಿವೃಷ್ಟಿ ಹಾಗೂ ಈ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿರವುದರಿಂದ ಕೃಷಿ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ಜಿಲ್ಲೆಯ ಎಸ್‌ಪಿ ರೈತರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಕಿತ್ತೂರು ತಾಲೂಕಿನ ರೈತರು, ರೈತ ಮಹಿಳೆಯರು ಇನಾಮ್ ಜಮೀನು ಪಟ್ಟ ಕೊಡಿ ಎಂದು ರೈತರು ಪ್ರತಿಭಟನೆ ಮಾಡಿದ್ದಾರೆ. ಬೆಳಗಾವಿ ಎಸ್.ಪಿ. ರೈತರಿಗೆ ನ್ಯಾಯ ಕೊಡಿಸುವ ಬದಲು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ತೊಡೆ ತಟ್ಟಿ ರೈತರನ್ನು ಲಾಠಿಯಿಂದ ಹೊಡೆದಿದ್ದಾರೆ. ಅವರು ರೈತರನ್ನು ಅವಮಾನಿಸಿರುವುದು ಖಂಡನೀಯ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಢೆಸಲಾಗುವುದು ಎಂದರು.

ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಸಂಚಾಲಕ ಮಹ್ಮದ್‌ಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಶಿವಾನಂದಯ್ಯ ಹಳ್ಳೂರಮಠ, ಈರಪ್ಪ ಮಳ್ಳೂರ, ಶಾಂತನಗೌಡ ಪಾಟೀಲ, ಯಶವಂತ ತಿಮಕಾಪುರ, ಶಂಕರಗೌಡ ಮರ್ಕಳ್ಳಿ, ಮೌನೇಶ ನಾಗಲಾಪುರ, ರಾಜಪ್ಪ ಮುತ್ತಗಿ, ನಾಗಪ್ಪ ಮರಿಗೌಡ್ರ, ಪುಟ್ಟಯ್ಯ ಮಳಲಿಮಠ ಹಾಗೂ ಪದಾಧಿಕಾರಿಗಳು ಇದ್ದರು.

೧೪ಎಚ್‌ಕೆಆರ್೧

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಎಕರೆಗೆ ₹೨೫ ಸಾವಿರ ಕೊಡಬೇಕೆಂದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹಿರೇಕೆರೂರು ಪಟ್ಟಣದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.