ಬಿಎಫ್‌ಟಿಗಳಿಗೆ ಆರೋಗ್ಯ ವಿಮೆ ಕಲ್ಪಿಸುವಂತೆ ಒತ್ತಾಯ

| Published : Feb 01 2025, 12:03 AM IST

ಬಿಎಫ್‌ಟಿಗಳಿಗೆ ಆರೋಗ್ಯ ವಿಮೆ ಕಲ್ಪಿಸುವಂತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮ-ನರೇಗಾ ಯೋಜನೆಯಲ್ಲಿ ಕ್ಷೇತ್ರ ಮಟ್ಟದ (ತಂತ್ರಜ್ಞ) ಸಿಬ್ಬಂದಿಯಾಗಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಎಫ್.ಟಿಗಳು ಯಾವುದೇ ರೀತಿಯ ಭದ್ರತೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಸರಕಾರ ಬಿಎಫ್‌ಟಿಗಳಿಗೆ ಆರೋಗ್ಯ ವಿಮೆ ಕಲ್ಪಿಸಬೇಕೆಂದು ರಾಜ್ಯ ಬಿಎಫ್‌ಟಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಭಿಮೇಶ ಕೆ.ಆರ್. ಒತ್ತಾಯಿಸಿದರು.

ಹಾನಗಲ್ಲ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮ-ನರೇಗಾ ಯೋಜನೆಯಲ್ಲಿ ಕ್ಷೇತ್ರ ಮಟ್ಟದ (ತಂತ್ರಜ್ಞ) ಸಿಬ್ಬಂದಿಯಾಗಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಎಫ್.ಟಿಗಳು ಯಾವುದೇ ರೀತಿಯ ಭದ್ರತೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಸರಕಾರ ಬಿಎಫ್‌ಟಿಗಳಿಗೆ ಆರೋಗ್ಯ ವಿಮೆ ಕಲ್ಪಿಸಬೇಕೆಂದು ರಾಜ್ಯ ಬಿಎಫ್‌ಟಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಭಿಮೇಶ ಕೆ.ಆರ್. ಒತ್ತಾಯಿಸಿದರು. ತಾಲೂಕಿನ ಗುಡಗುಡಿ ಗ್ರಾಮದಲ್ಲಿ ಅಕಾಲಿಕವಾಗಿ ಮೃತಪಟ್ಟ ಬಿಎಫ್‌ಟಿ ಸಿಬ್ಬಂದಿ ನಿಂಗಯ್ಯ ಕುಲಕರ್ಣಿ ಅವರ ಕುಟುಂಬಕ್ಕೆ 1 ಲಕ್ಷ ರು. ಸಹಾಯಧನದ ಚೆಕ್‌ನ್ನು ವಿತರಿಸಿ ಮಾತನಾಡಿದ ಅವರು, ಬಿಎಫ್‌ಟಿಗಳು ಅನಾರೋಗ್ಯ ಕಾರಣಗಳಿಂದ ಅಕಾಲಿಕ ಮರಣಹೊಂದುತ್ತಿದ್ದು, ಅವರನ್ನೇ ನಂಬಿರುವ ಕುಟುಂಬಸ್ಥರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕ.ರಾ.ಬೆ.ಪೂ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಂಘಟನೆಯ ನಿರ್ಣಯದಂತೆ ಮೃತರ ಕುಟುಂಕ್ಕೆ 1 ಲಕ್ಷ ರು. ಸಹಾಯಧನ ನೀಡುವುದರ ಮೂಲಕ ನೊಂದ ಕುಟುಂಬಕ್ಕೆ ಸಾಂತ್ವನ ನೀಡಲಾಗುತ್ತಿದೆ. ಈ ರೀತಿ ಅಕಾಲಿಕ ಮರಣ ಹೊಂದುತ್ತಿರುವ ಹಿನ್ನೆಲೆಯಲ್ಲಿ ಬಿಎಫ್‌ಟಿಗಳಿಗೆ ಸರಕಾರದ ವತಿಯಿಂದ ಇಎಸ್‌ಐಪಿಎಫ್ ಮತ್ತು ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವುದರ ಮೂಲಕ ಮೃತರ ಕುಟುಂಬದ ರಕ್ಷಣೆಗೆ ಬರಬೇಕು ಎಂದು ಒತ್ತಾಯಿಸಿದರು. ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಮಾತನಾಡಿ, ನರೇಗಾ ಯೋಜನೆ ರಾಷ್ಟ್ರ ಮಟ್ಟದ ಬಹು ದೊಡ್ಡ ಯೋಜನೆಯಾಗಿದ್ದು, ಈ ಯೋಜನೆಯ ಯಶಸ್ವಿಯಲ್ಲಿ ಬಿಎಫ್‌ಟಿಗಳ ಪಾತ್ರ ಅಮೂಲ್ಯವಾದುದು. ಈ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಕ್ಷೇಮಾಭಿವೃದ್ಧಿ ಸಂಘಟನೆ ಮೃತರ ಕುಟುಂಬಕ್ಕೆ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು. ಬಿಎಫ್‌ಟಿ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಮಹೇಶ ಕುಪ್ಪೇಲೂರ ಮಾತನಾಡಿ, ರಾಜ್ಯ ಕ್ಷೇಮಾಭಿವೃದ್ಧಿ ಸಂಘಟನೆಯು ತೆಗೆದುಕೊಂಡಿರುವ ತೀರ್ಮಾನ ತುಂಬಾ ಅನುಕರಣೀಯವಾದುದು. ಹಲವಾರು ಜನರಿಗೆ ಕೆಲಸದ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತಿದ್ದು, ಸರಕಾರ ಇದನ್ನು ಗಂಭಿರವಾಗಿ ಪರಿಗಣಿಸಿ ಬಿಎಫ್‌ಟಿಗಳಿಗೆ ಸೂಕ್ತ ಸೇವಾ ಭದ್ರತೆ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು. ಎನ್‌ಇಡಬ್ಲೂಎಕೆ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಸಿದ್ದನಗೌಡ್ರು, ಬಿಎಫ್‌ಟಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ರಾಜ್ಯ ಖಜಾಂಚಿ ಕಿರಣಕುಮಾರ, ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಎಂ., ರಾಜ್ಯ ಆಡಳಿತ ನಿರ್ದೇಶಕ ಬಸವರಾಜ ಹರಪನಹಳ್ಳಿ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.