ಸಾರಾಂಶ
2016ರ ಕಾಯ್ದೆಯನ್ವಯ ಶೇ.5ರಷ್ಟು ಮೀಸಲಾತಿ ಕಡ್ಡಾಯ ಮಾಡಲು ಮನವಿ
ಕನ್ನಡಪ್ರಭ ವಾರ್ತೆ ಸುರಪುರ
ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ, ಸಚಿವಾಲಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಹಕ್ಕುಗಳ ಒಕ್ಕೂಟ (ರಿ) ಕಲ್ಯಾಣ ಕರ್ನಾಟಕ ವಿಭಾಗದ ಸದಸ್ಯರು ನಗರದ ಶಾಸಕರ ಕಚೇರಿಯಲ್ಲಿ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿಕಲಚೇತನರ ಮುಖಂಡರು, ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ 13 ಲಕ್ಷಕ್ಕೂ ಹೆಚ್ಚು ವಿವಿಧ ನೂನ್ಯತೆ ಗಳಿರುವ ಅಂಗವಿಕಲರಿದ್ದಾರೆ. ಆದ್ದರಿಂದ ಅಂಗವಿಕಲರಿಗಾಗಿ ವಿಕಲಚೇತನರ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ಸಚಿವಾಲಯ ಸ್ಥಾಪಿಸಬೇಕು. ಯಾದಗಿರಿ ಜಿಲ್ಲೆಯಲ್ಲಿ ವಿಕಲಚೇತನರ ಪುನರ್ ವಸತಿ ಕೇಂದ್ರ ಸ್ಥಾಪಿಸಬೇಕು. ಸುರಪುರ ಹಾಗೂ ಹುಣಸಗಿ ತಾಲೂಕಿನಲ್ಲಿ 6000ಕ್ಕೂ ಅಧಿಕ ವಿವಿಧ ಬಗೆಯ ವಿಕಲಚೇತನರಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿಕಲಚೇತನರ ಕುಂದುಕೊರತೆ ಸಭೆಯನ್ನು ಕರೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸರಕಾರದಿಂದ ಮಂಜೂರಾಗುವ ವಿವಿಧ ವಸತಿ ಯೋಜನೆಗಳಲ್ಲಿ ವಿಕಲಚೇತನರಿಗೆ ಶೇ.5ರಷ್ಟು ಮನೆಗಳ ಹಂಚಿಕೆ ಮೀಸಲಾತಿ ಇದ್ದರೂ ಗ್ರಾಪಂಗಳಲ್ಲಿ ಅನುಷ್ಠಾನವಾಗುತ್ತಿಲ್ಲ. ಸುರಪುರ ಮತ್ತು ಹುಣಸಗಿ ತಾಲೂಕುಗಳಿಗೆ ಹಲವು ವರ್ಷಗಳಿಂದ ಮನೆಗಳು ಹಂಚಿಕೆಯಾಗಿಲ್ಲ. 2016ರ ಕಾಯ್ದೆಯನ್ವಯ ಶೇ.5ರಷ್ಟು ಮೀಸಲಾತಿ ಕಡ್ಡಾಯಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ಮನೆಗಳ ಹಂಚಿಂಕೆಯಲ್ಲಿ ವಿಕಲಚೇತನರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೋರಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರಾಜಾ ವೇಣುಗೋಪಾಲ ನಾಯಕ,ವಿಕಲಚೇತನರನ್ನು ಯಾರು ಕೀಳಾಗಿ ಕಾಣಬಾರದು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸುವೆ. ಪ್ರತ್ಯೇಕ ಸಚಿವಾಲಯ, ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸರಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಮನವಿ ಸಲ್ಲಿಸುವ ವೇಳೆ ವಿಕಲಚೇತನರ ಹಕ್ಕುಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರಡ್ಡಿ ರಾಜನಕೋಳೂರ, ಎಂಆರ್‌ಡಬ್ಲ್ಯ ಹಾಗೂ ವಿಆರ್‌ಡಬ್ಲ್ಯ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಾಳಪ್ಪ ಪೂಜಾರಿ, ಪರಶುರಾಮ ಭಜಂತ್ರಿ, ಸಿದ್ದಪ್ಪ ಯಡಹಳ್ಳಿ, ಪ್ರಭು ಜೈನಾಪುರ, ನೈಮೂದ್ದೀನ್ ಸುರಪುರ, ರಾಮಕೋಟೆ ಕೆಂಗೂರಿ, ಹುಸನಪ್ಪ ದೇವಾಪುರ, ಚಂದ್ರು ಕವಡಿಮಟ್ಟಿ, ಶರಣು ಹೆಗ್ಗಣದೊಡ್ಡಿ ಸೇರಿದಂತೆ ಇತರರಿದ್ದರು.