ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಮಾರ್ಗ ಮಧ್ಯೆ ಹಾದು ಹೋಗುವ ಎಕ್ಸ್ ಪ್ರೆಸ್ ರೈಲು ಗಾಡಿಗಳಿಗೆ ಪಟ್ಟಣದ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರ್ಯ ನಿಮಿತ್ತ ಮೈಸೂರು ಕಡೆಗೆ ತೆರಳುತ್ತಿದ್ದ ಅವರನ್ನು ವಿವಿಧ ಸಂಘಟನೆಗಳ ಮುಂಖಡರು ಭೇಟಿ ಮಾಡಿ ಅಭಿನಂದಿಸಿ ಪಟ್ಟಣದ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಕೋರಿ ಮನವಿ ಸಲ್ಲಿಸಿದರು.
ಶ್ರೀರಂಗಪಟ್ಟಣ ಒಂದು ಐತಿಹಾಸಿಕ ಸ್ಥಳ. ತಾಲೂಕು ಕೇಂದ್ರವಾಗಿದೆ. ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳು, ದೇವಾಲಯಗಳು, ಪ್ರಾಚ್ಯವಸ್ತು ಕೇಂದ್ರಗಳಿವೆ. ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ದೂರದ ಊರಿನಿಂದ ರೈಲುಗಾಡಿಗಳಲ್ಲಿ ಬಂದು ಹೋಗುತ್ತಾರೆ. ಆದರೆ, ಎಕ್ಸ್ ಪ್ರೆಸ್ ರೈಲುಗಳು ನಿಲ್ಲದ ಕಾರಣ ಜನರಿಗೆ ಎಕ್ಸ್ ಪ್ರೆಸ್ ರೈಲುಗಳಲ್ಲಿ ಬರಲು ಸಾಧವಾಗುತ್ತಿಲ್ಲ. ಹಾಗಾಗಿ ತಾವುಗಳು ಎಕ್ಸ್ ಪ್ರೆಸ್ ರೈಲುಗಳನ್ನು ಪಟ್ಟಣದಲ್ಲಿ ನಿಲುಗಡೆಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡುವಂತೆ ಮನವಿ ಮಾಡಿದರು.ಅಲ್ಲದೇ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ ಜೊತೆಗೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ, ವಿದ್ಯುತ್ ಸೌಕರ್ಯ, ವಾಹನದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಇದುವರೆವಿಗೂ ರೈಲ್ವೆ ಇಲಾಖೆಯಿಂದ ರೈಲ್ವೆ ಸಲಹಾ ಸಮಿತಿ ಸದಸ್ಯರ ಸಭೆ ಕರೆದಿಲ್ಲ ಎಂದು ದೂರು ಸಲ್ಲಿಸಿ ಶೀಘ್ರ ಈ ಎಲ್ಲಾ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಅವರು ವಿವಿಧ ಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿ, ರೈಲು ನಿಲುಗಡೆ ಹಾಗೂ ತಮ್ಮ ವಿವಿಧ ಭೇಡಿಕೆಗಳನ್ನು ಮುಂದಿನ 15 ದಿನಗಳೊಳಗೆ ಬಗೆ ಹರಿಸಿಕೊಡುವುದಾಗಿ ಭರವಸೆ ನೀಡಿದರು.ಈ ವೇಳೆ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು, ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ, ಮೈಸೂರು ರೈಲ್ವೆ ವಿಭಾಗೀಯ ಸಲಹಾ ಸಮಿತಿ ಹಾಗೂ ಶ್ರೀ ರಂಗನಾಯಕಿ ಸ್ತ್ರೀ ಸಮಾಜ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಕೇಂದ್ರ ರೈಲ್ವೇ ಸಚಿವ ವಿ. ಸೋಮಣ್ಣ ಇದ್ದರು.