ಕುಟ್ರಹಳ್ಳಿ ಬಳಿ ಟೋಲ್ ಗೇಟ್ ತೆರವಿಗೆ ಒತ್ತಾಯ

| Published : Oct 10 2024, 02:28 AM IST

ಸಾರಾಂಶ

ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಶಾಸಕ ವಿಜಯೇಂದ್ರ ನೇತೃತ್ವದಲ್ಲಿ ರೈತ ಮುಖಂಡರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ಕುಟ್ರಹಳ್ಳಿ ಬಳಿ ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಿಸಿ ರೈತರು, ಜನಸಾಮಾನ್ಯರಿಂದ ಹಣ ಪೀಕಲಾಗುತ್ತಿದೆ ಎಂದು ಕಳೆದ ಕೆಲ ತಿಂಗಳಿಂದ ರೈತ ಮುಖಂಡರು, ಬಸ್ ಮಾಲೀಕರು ಸಾರ್ವಜನಿಕರ ಹೋರಾಟ ತಾರಕಕ್ಕೇರಿದ್ದು ಇದೀಗ ಪ್ರತಿಭಟನಾ ನಿರತರನ್ನು ಸಮಾಧಾನಿಸುವ ಪ್ರಯತ್ನದ ಭಾಗವಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ತಾಲೂಕಿನ ಹಲವು ಮುಖಂಡರ ಸಮ್ಮುಖದಲ್ಲಿ ಭೇಟಿಯಾಗಿ ಟೋಲ್ ಗೇಟ್ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.

ಪಟ್ಟಣದ ಹೊರವಲಯ ಕುಟ್ರಹಳ್ಳಿ ಸಮೀಪ ನಿರ್ಮಿಸಲಾಗಿರುವ ಟೋಲ್ ಗೇಟ್ ಹಾಗೂ ಸವಳಂಗ ಸಮೀಪ ನಿರ್ಮಾಣವಾಗಿರುವ ಟೋಲ್ ಗೇಟ್ ಅಂತರ ಕೇವಲ 30 ಕಿಮೀ ಗಳಿದ್ದು ಸರ್ಕಾರದ ಆದೇಶದನ್ವಯ 60 ಕಿಮೀ ಅಂತರದಲ್ಲಿ ಟೋಲ್‌ಗೇಟ್ ನಿರ್ಮಿಸುವಂತಿಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.

ನಿತ್ಯ ಶಿಕಾರಿಪುರಕ್ಕೆ ಧಾವಿಸುವ ಸ್ಥಳೀಯ ರೈತರು, ವಾಹನ ಮಾಲೀಕರು ಪ್ರತಿಭಟಿಸುತ್ತಿದ್ದು ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಸ್ಥಿತ್ವದ ಮೂಲಕ ರಾಜಕೀಯ ಪಕ್ಷದ ಮುಖಂಡರಿಗೆ ಬಿಸಿ ಮುಟ್ಟಿಸಿದೆ.

ಟೋಲ್ ಗೇಟ್ ನಿರ್ಮಾಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಶಾಸಕ ವಿಜಯೇಂದ್ರ ಅ ಅವರು ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ಸಹಿತ ರೈತ ಮುಖಂಡರೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿರವರನ್ನು ಭೇಟಿಯಾಗಿ ಟೋಲ್ ಗೇಟ್ ತೆರವುಗೊಳಿಸುವಂತೆ ಅಹವಾಲು ಸಲ್ಲಿಸಿದ್ದಾರೆ.

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಜಗದೀಶ್ ಈಸೂರು, ಗಣೇಶ್ ನಾಗೀಹಳ್ಳಿ, ಶಂಭು, ಯೋಗೀಶ್, ಅಶೋಕ್ ಮಾರವಳ್ಳಿ, ಹೋರಾಟ ಸಮಿತಿ ಉಪಾಧ್ಯಕ್ಷ ಜಯಪ್ಪಗೌಡ್ರು, ಸಂಚಾಲಕ ವಿನಯ್ ಪಾಟೀಲ್, ಅಬ್ದುಲ್ ನವೀದ್, ಕುಬೇರಪ್ಪ ಕೊರಟಗೆರೆ, ಗಂಗಣ್ಣ ಕವಲಿ, ಪರಮೇಶಣ್ಣ ಮಳೂರು, ಸಿದ್ದಲಿಂಗ ಸ್ವಾಮಿ ಬಳ್ಳಿಗಾವಿ, ಪುಟ್ಟಣ್ಣ ಇದ್ದರು.

ಸಚಿವರಿಂದ ಸಕಾರಾತ್ಮಕ ಸ್ಪಂದನೆ

ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಶಾಸಕ ವಿಜಯೇಂದ್ರ ಖುದ್ದು ಸಮಕ್ಷಮದಲ್ಲಿ ಈ ಬಗ್ಗೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ತಿಳಿಸಿದ್ದಾರೆ.