ವಿದೇಶಿ ಪಕ್ಷಿಗಳ ಲಗ್ಗೆ; ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

| Published : Dec 01 2024, 01:32 AM IST

ಸಾರಾಂಶ

ರೈತರು ಹಕ್ಕಿಗಳ ನಿತ್ಯ ಕಾಟದಿಂದ ದಿಕ್ಕು ತೋಚದೆ ಆತಂಕದ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿಯಲ್ಲಿದ್ದಾನೆ

ಶಿರಹಟ್ಟಿ: ತಾಲೂಕಿನ ಮಾಗಡಿ ಕೆರೆಗೆ ವಿವಿಧ ಜಾತಿಯ ವಿದೇಶಿ ಪಕ್ಷಿಗಳು ಪ್ರತಿ ವರ್ಷವೂ ಆಗಮಿಸುತ್ತಿದ್ದು, ನಿತ್ಯ ಸಂಜೆ ವೇಳೆಗೆ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ತಿಂದು ಹಾನಿ ಮಾಡುತ್ತಿದ್ದು, ಅಧಿಕಾರಿಗಳು ತಕ್ಷಣ ರೈತರ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಮುಖಂಡ ಚನ್ನಪ್ಪ ಷಣ್ಮುಖಿ, ಬಸವರಾಜ ವಿ. ಪಲ್ಲೇದ ಮಾತನಾಡಿ, ಸದ್ಯ೨೫ ರಿಂದ ೩೦ ದಿನದ ಕಡಲೆ ಬೆಳೆ ಇದ್ದು, ಬೆಳೆಯ ಮುಗುಳು (ಜಿಗುರು) ಹಾಗೂ ಶೇಂಗಾ ಹರಗಿದ್ದು, ಜಮೀನಿನಲ್ಲಿ ಅಪಾರ ಪ್ರಮಾಣದ ಶೇಂಗಾ ಕಾಯಿ ಉಳಿದಿದ್ದು ಪಕ್ಷಿಗಳ ಹಿಂಡು ಲಗ್ಗೆ ಇಟ್ಟು ತಿಂದು ಹಾಕುತ್ತಿವೆ.

ಕೆರೆಯ ಸುತ್ತಲಿನ ಗ್ರಾಮಗಳಾದ ಮಾಗಡಿ, ಹೊಳಲಾಪೂರ, ಗೊಜನೂರ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ಮುಳಗುಂದ, ಲಕ್ಷ್ಮೇಶ್ವರ, ಅಕ್ಕಿಗುಂದ, ಚನ್ನಪಟ್ಟಣ, ಪರಸಾಪುರ ಗ್ರಾಮಗಳ ಯರಿ ಜಮೀನಿನಲ್ಲಿಯ ಕಡಲೆ ಹಾಗೂ ಹರಗಿದ ಶೇಂಗಾ ಬೆಳೆ ತಿಂದು ಇಡೀ ಜಮೀನಿನಲ್ಲಿಯ ಫಸಲನ್ನೇ ಖಾಲಿ ಮಾಡುತ್ತಿವೆ ಎಂದು ಅಳಲು ತೋಡಿಕೊಂಡರು.

ಮುಂಗಾರು ಬೆಳೆ ಸಮಯದಲ್ಲಿ ಕಾಡು ಹಂದಿ, ಜಿಂಕೆ, ಮಂಗಗಳ ಕಾಟದಿಂದ ತತ್ತರಿಸಿ ಹೋಗಿದ್ದು, ಹಿಂಗಾರು ಬಿತ್ತನೆಯಿಂದ ಹೆಚ್ಚುವರಿ ಇಳುವರಿ ಪಡೆದು ಜೀವನೋಪಾಯ ಸಾಗಿಸಬೇಕೆಂದು ಅಂದುಕೊಂಡ ರೈತರು ಹಕ್ಕಿಗಳ ನಿತ್ಯ ಕಾಟದಿಂದ ದಿಕ್ಕು ತೋಚದೆ ಆತಂಕದ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿಯಲ್ಲಿದ್ದಾನೆ ಎಂದರು.

ಒಂದು ಬಾರಿ ವಲಸೆ ಹಕ್ಕಿಗಳು ರೈತರ ಹೊಲಕ್ಕೆ ಲಗ್ಗೆ ಇಟ್ಟರೆ ಕನಿಷ್ಟ ಒಂದು ಎಕರೆ ಪ್ರದೇಶದ ಬೆಳೆ ತಿಂದು ಹಾಕುತ್ತಿವೆ. ರಾತ್ರಿ ಸಮಯದಲ್ಲಿ ಹಕ್ಕಿಗಳ ಹಿಂಡನ್ನು ಕಾಯುವುದು ಕಷ್ಟದ ಕೆಲಸವಾಗಿದೆ. ವಿಪರೀತ ಚಳಿಯಿಂದ ಹೊರಗೆ ಬರದ ಸ್ಥಿತಿಯಲ್ಲಿ ಇದ್ದು, ಒಂದೊಮ್ಮೆ ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿ ಹೊಲಕ್ಕೆ ಹೋದರೆ ಒಂದು ಕಡೆಯಿಂದ ಹಕ್ಕಿ ಹೊಡೆದರೆ ಮತ್ತೊಂದು ಕಡೆ ಹಾರಿ ಹೋಗಿ ತಿನ್ನುತ್ತಿವೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಗಳ ಹಿಂಡು ನಿತ್ಯ ಹೊಲಕ್ಕೆ ಲಗ್ಗೆಯಿಟ್ಟು ಬೆಳೆ ತಿಂದು ಹಾನಿ ಮಾಡುತ್ತಿರುವ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯ ವರದಿ ಸಿದ್ದಪಡಿಸಿ ಮೇಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿ ರೈತರಿಗೆ ಯೋಗ್ಯ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಲಯ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಸ್ವೀಕರಿಸಿದರು. ಮನವಿ ನೀಡುವಲ್ಲಿ ಬಸವರಾಜ ವಿ. ಪಲ್ಲೇದ, ಬಸವರಾಜ ಮಟ್ಟಿ, ನಿಂಗಪ್ಪ ಪೋಡಿ, ಈರಣ್ಣ ಅಣ್ಣಿಗೇರಿ, ಮಹಾಂತಪ್ಪ ಸೊರಟೂರ, ಶೇಖಣ್ಣ ಸೊರಟೂರ ಸೇರಿದಂತೆ ಅನೇಕರು ಇದ್ದರು.

ರೈತರು ದೂರವಾಣಿ ಕರೆ ಮಾಡಿ ಹಕ್ಕಿಗಳಿಂದ ಬೆಳೆ ಹಾನಿಯಾಗುತ್ತಿದೆ ಎಂದು ತಿಳಿಸಿದ್ದರಿಂದ ಖುದ್ದು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಸುಮಾರು ೪ ರಿಂದ ೫ ಸಾವಿರ ಹಕ್ಕಿಗಳು ಒಮ್ಮೆಲೆ ರೈತರ ಜಮೀನಿಗೆ ಲಗ್ಗೆ ಇಡುತ್ತಿರುವುದರಿಂದ ಒಂದು ತಾಸಿನಲ್ಲಿ ಸುಮಾರು ೪ ರಿಂದ ೫ ಎಕರೆ ಪ್ರದೇಶದ ಬೆಳೆ ಹಾನಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ರೈತರು ಇಲಾಖೆಗೆ ಮನವಿ ಸಲ್ಲಿಸಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ತಿಳಿಸಿದ್ದಾರೆ.