ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ವಿದೇಶಿ ಪ್ರವಾಸಿಗರು ಬರುವುದು ಸಾಮಾನ್ಯ. ಆದರೆ ಹೋಳಿ ಹಬ್ಬದಂದು ಸ್ಥಳೀಯರೊಂದಿಗೆ ವಿದೇಶಿಗರು ಸೇರಿಕೊಂಡು ಹೋಳಿ ಆಚರಿಸುವುದು ಹಂಪಿಯ ಮತ್ತೊಂದು ವಿಶೇಷ.

ವಿದೇಶಿ ಪ್ರವಾಸಿಗರು ಹಂಪಿಯಲ್ಲಿ ಬುಧವಾರ ನಡೆದ ಹೋಳಿ ಹಬ್ಬದಲ್ಲಿ ಬಿಸಿಲನ್ನು ಲೆಕ್ಕಿಸದೇ ಸ್ಥಳೀಯರ ಜೊತೆ ಹೋಳಿಯ ರಂಗಿನಾಟ ಆಚರಿಸಿದರು.

ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಮುಖ್ಯಗೋಪುರದ ಮುಂಭಾಗದಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಆತ್ಮೀಯತೆಯಿಂದ ಮತ್ತು ಸಲಿಗೆಯಿಂದ ಬೆರೆತು ಹಲಗೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಾ ಬಣ್ಣದಾಟದಲ್ಲಿ ತೊಡಗಿಕೊಂಡಿದ್ದರು.

ಈ ಬಾರಿ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಕಂಡು ಬಂದರು. ನವೆಂಬರ್‌ನಿಂದ ಮಾರ್ಚ್‌ವರೆಗೆ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿರುತ್ತಾರೆ. ಬಹುತೇಕ ಪ್ರವಾಸಿಗರು ಹಂಪಿಯಲ್ಲಿ ಹೋಳಿಯಾಡಲೆಂದೇ ಉಳಿದುಕೊಂಡು ಬಣ್ಣದಾಟ ಮುಗಿಸಿಕೊಡು ಹಂಪಿಯಿಂದ ನೇರವಾಗಿ ಗೋವಾ, ಗೋಕರ್ಣ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ.

ಇನ್ನು ಕೆಲ ವಿದೇಶಿ ಪ್ರವಾಸಿಗರು ದೇಶದ ವಿವಿಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಂಪಿಗೆ ಬಂದು, ಹಂಪಿಯ ಸ್ಮಾರಕಗಳನ್ನು ನೋಡಿಕೊಂಡು, ಕೊನೆಯಲ್ಲಿ ಹೋಳಿ ಹಬ್ಬದಲ್ಲಿ ಭಾಗವಹಿಸುತ್ತಾರೆ. ವಿದೇಶಿ ಪ್ರವಾಸಿಗರಲ್ಲಿ ಹೊಸದಾಗಿ ಹೋಳಿಯಲ್ಲಿ ಪಾಲ್ಗೊಂಡವರು ಆಚ್ಚರಿ, ಸಂತೋಷ, ಸಂಭ್ರಮವನ್ನು ವ್ಯಕ್ತಪಡಿಸಿದರು.


ಮಂಗಳವಾರ ರಾತ್ರಿ ರತಿ-ಕಾಮಣ್ಣರನ್ನು ಕೂರಿಸಿದ ಸ್ಥಳದಲ್ಲಿ ನಡೆಯುವ ಕಾಮದಹನ ಕಾರ್ಯಕ್ರಮದಲ್ಲಿ ಸ್ಥಳೀಯರ ಜೊತೆ ವಿದೇಶಿಗರೂ ಪಾಲ್ಗೊಂಡು, ರತಿ- ಕಾಮಣ್ಣರ ಪ್ರತಿಷ್ಠಾಪಿಸುವ ಆಚರಣೆಯ ಬಗ್ಗೆ ಇತಿಹಾಸ ತಿಳಿದುಕೊಂಡು ನಂತರ ಕಾಮಣ್ಣನನ್ನು ದಹನ ಮಾಡುವ ಸಂದರ್ಭದಲ್ಲಿ ಬೆಂಕಿ ಸುತ್ತ ಸುತ್ತುತ್ತಾ, ಹಲಗೆ ವಾದನಕ್ಕೆ ಹೆಜ್ಜೆ ಹಾಕುತ್ತಾ ಹೋಳಿ ಹಬ್ಬದಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು.

ಬುಧವಾರ ಬೆಳಿಗ್ಗೆ ರಂಗಿನಾಟದಲ್ಲಿ ಪುರುಷರು- ಮಹಿಳೆಯರು ಎಂಬ ಭೇದವಿಲ್ಲದೇ ಪಾಲ್ಗೊಂಡು ಸ್ಥಳೀಯರ ಜೊತೆ ಬಣ್ಣದಲ್ಲಿ ಮಿಂದು ಸಂಭ್ರಮಿಸಿದರು. ವಿದೇಶಿ ಪ್ರವಾಸಿಗರು ಮತ್ತು ಸ್ಥಳೀಯರು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚಾಡಿಕೊಂಡು ಮುಖಕ್ಕೆ ಹತ್ತಿದ ಬಣ್ಣ ನೋಡಿ ಖುಷಿಪಟ್ಟು ಬಣ್ಣದಲ್ಲಿ ಮಿಂದು ಹೋದರು. ಹಲಗೆ ವಾದನಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಹಾಕಿ ಮೈಮರೆತರು.

ಸ್ಥಳೀಯ ಚಿಕ್ಕಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು, ಆ ಮಕ್ಕಳಿಗೆ ಬಣ್ಣದ ಪ್ಯಾಕೇಟ್‌ ಮತ್ತು ಬಣ್ಣ ಎರಚುವ ಪಿಚಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿಕೊಟ್ಟು ಮಕ್ಕಳನ್ನು ಸಂತೋಷಪಡಿಸಿ, ತಾವೂ ಸಂತೋಷಪಡುತ್ತಿದ್ದರು.

ವಿದೇಶಿ ಪ್ರವಾಸಿಗರು ಬಣ್ಣದಾಟದಲ್ಲಿ ತೊಡಗಿಕೊಂಡಿರುವ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಫೋಟೋ ಮತ್ತು ವಿಡಿಯೋ ತುಣುಕುಗಳನ್ನು ತೆಗೆದುಕೊಂಡು ತಮ್ಮೂರಿಗೆ ರವಾನಿಸುತ್ತಿದ್ದರು.

ವಿದೇಶಿ ಪ್ರವಾಸಿಗರು ಹೋಳಿ ಹಬ್ಬದಲ್ಲಿ ತೊಡಗಿಕೊಂಡಿರುವುದರಿಂದ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಜಿಲ್ಲಾ ಎಸ್‌ಪಿ ಎಸ್‌.ಜಾಹ್ನವಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಂಡಿದ್ದರು.

ಹಂಪಿಯಲ್ಲಿ ನಡೆಯುವ ಹೋಳಿಯಲ್ಲಿ ಭಾಗವಹಿಸಿರುವುದು ನಮಗೆ ಅತ್ಯಂತ ಸಂತೋಷವಾಗಿದೆ. ಹಂಪಿಯಲ್ಲಿರುವ ಸ್ಮಾರಕಗಳನ್ನು ನೋಡಿದಷ್ಟೇ ಹೋಳಿಯಲ್ಲಿ ಭಾಗವಹಿಸಿದ ಖುಷಿಯಾಗಿದೆ. ಹಂಪಿಯಲ್ಲಿ ಹೋಳಿ ಹಬ್ಬವನ್ನು ಸ್ಥಳೀಯರು ವಿದೇಶಿ ಪ್ರವಾಸಿಗರೊಂದಿಗೆ ಸೇರಿ ಆಚರಿಸುತ್ತಿರುವುದು ನಮಗೆ ಭಾರೀ ಸಂತೋಷ ನೀಡಿದೆ ಎನ್ನುತ್ತಾರೆ ವಿದೇಶಿ ಪ್ರವಾಸಿಗರಾದ ಆರ್ಯಾನ್‌, ಸೆಫೆನ್‌, ಯಾರಿಕ್‌, ಮರಿಯಾ.

ಹಂಪಿಯಲ್ಲಿ ಹೋಳಿ ಹಬ್ಬಕ್ಕಾಗಿ ಕೆಲ ವಿದೇಶಿ ಪ್ರವಾಸಿಗರು ಹಂಪಿಗೆ ಬಂದು ಹಬ್ಬವನ್ನು ಆಚರಿಸುತ್ತಾರೆ. ಸ್ಥಳೀಯರೊಂದಿಗೆ ವಿದೇಶ ಪ್ರವಾಸಿಗರು ಬೆರತು ಹೋಳಿ ಹಬ್ಬವನ್ನು ಆಚರಿಸುತ್ತಿರುವುದು ಹಂಪಿಯಲ್ಲಿ ವಿಶೇಷ ಎನ್ನುತ್ತಾರೆ ಹಂಪಿ ನಿವಾಸಿ ಬಿ.ಕಿರಣಕುಮಾರ್.