ರೆಸಾರ್ಟ್‌ಗಳಿಂದ ಕಾಲ್ಕಿತ್ತ ವಿದೇಶಿಯರು

| Published : Mar 23 2025, 01:33 AM IST

ಸಾರಾಂಶ

ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ರೆಸಾರ್ಟ್‌ಗಳು ಬಿಕೋ ಎನ್ನುತ್ತಿವೆ. ಸಾಣಾಪುರ ಮತ್ತು ಬಸಾಪುರ ಬಳಿ ಇರುವ ರೆಸಾರ್ಟ್‌ಗಳು ಈಗ ವಿದೇಶಿಯರು ಇಲ್ಲದೇ ಖಾಲಿ ಖಾಲಿಯಾಗಿವೆ. ಅಧಿಕಾರಿಗಳು ದಾಳಿ ನಡೆಸಿ ರೆಸಾರ್ಟ್‌ಗಳಲ್ಲಿ ಕೆಲ ವಸ್ತುಗಳನ್ನು ಸಹ ಜಪ್ತಿ ಮಾಡಿದ್ದರು. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಇಲ್ಲದಂತಾಗಿವೆ.

ರಾಮಮೂರ್ತಿ ನವಲಿ

ಗಂಗಾವತಿ:

ಕಳೆದ 15 ದಿನಗಳ ಹಿಂದೆ ಸಾಣಾಪುರ ಬಳಿ ನಡೆದ ವಿದೇಶಿ ಮಹಿಳೆ ಮೇಲಿನ ಗ್ಯಾಂಗ್‌ರೇಪ್‌ ಹಾಗೂ ಅಧಿಕಾರಿಗಳು ದಾಳಿ ನಡೆಸಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಠಿಣ ಕ್ರಮಕೈಗೊಂಡಿದ್ದರಿಂದ ತಲ್ಲಣಗೊಂಡಿರುವ ವಿದೇಶಿ ಪ್ರವಾಸಿಗರು ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಂದ ಗಂಟು ಮೂಟೆ ಕಟ್ಟಿಕೊಂಡು ಪಯಣ ಬೆಳೆಸಿದ್ದಾರೆ.

ಅತ್ಯಾಚಾರ ನಡೆದ ಬಳಿಕವೂ ಕೆಲವು ವಿದೇಶಿಗರು ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಲ್ಲಿ ತಂಗಿದ್ದರು. ಆದರೆ, ಮೂರು ದಿನಗಳ ಹಿಂದೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಸಾಣಾಪುರ, ಹನುಮಹಳ್ಳಿ, ಜಂಗ್ಲಿ, ಬಸಾಪುರ ಸೇರಿದಂತೆ ವಿವಿಧ ಗ್ರಾಮಗಳ ಗುಡ್ಡಗಾಡು ಪ್ರದೇಶದಲ್ಲಿ ಅನಧಿಕೃತವಾಗಿರುವ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಮೇಲೆ ದಾಳಿ ನಡೆಸಿ ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಕಡಿವಾಣ ಹಾಕಿದ್ದರು. ಇದರಿಂದ ವಿದೇಶಿಯರಿಗೆ ಸೌಲಭ್ಯ ಸಿಗದೆ ಬೈಕ್ ಮೇಲೆ ಗಂಟು ಮೂಟೆ ಕಟ್ಟಿಕೊಂಡು ಕಾಲ್ಕಿತ್ತಿದ್ದಾರೆ.

ಖಾಲಿ ಖಾಲಿ:

ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ರೆಸಾರ್ಟ್‌ಗಳು ಬಿಕೋ ಎನ್ನುತ್ತಿವೆ. ಸಾಣಾಪುರ ಮತ್ತು ಬಸಾಪುರ ಬಳಿ ಇರುವ ರೆಸಾರ್ಟ್‌ಗಳು ಈಗ ವಿದೇಶಿಯರು ಇಲ್ಲದೇ ಖಾಲಿ ಖಾಲಿಯಾಗಿವೆ. ಅಧಿಕಾರಿಗಳು ದಾಳಿ ನಡೆಸಿ ರೆಸಾರ್ಟ್‌ಗಳಲ್ಲಿ ಕೆಲ ವಸ್ತುಗಳನ್ನು ಸಹ ಜಪ್ತಿ ಮಾಡಿದ್ದರು. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಇಲ್ಲದಂತಾಗಿವೆ. ಪ್ರವಾಸೋದ್ಯಮ ಕ್ಷೇತ್ರ ಬೆಳೆಯುವ ಹಂತದಲ್ಲಿದ್ದ ಅಂಜನಾದ್ರಿ, ಕಿಷ್ಕಿಂದ ಪ್ರದೇಶಗಳು ಅಹಿತಕರ ಘಟನೆಗಳಿಂದ ತಲ್ಲಣಗೊಂಡಿವೆ.

ಬಿಗಿ ಕ್ರಮ:ವಿದೇಶಿ ಸೇರಿ ಇಬ್ಬರ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕಾಡಳಿತ ಹಾಗೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿವೆ. ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಿಗೆ ಬರುವ ವಿದೇಶಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ಬರುವವರು ಹಾಗೂ ಹೋಗುವವರ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜತೆಗೆ ರೆಸಾರ್ಟ್‌ಗಳ ಮೇಲೆ ದಿಢೀರ್‌ ದಾಳಿ ನಡೆಸಿ ಜಾಲಾಡುತ್ತಿದ್ದಾರೆ. ಹೀಗಾಗಿ ಬುಕ್ಕಿಂಗ್‌ ಮಾಡಿಕೊಂಡ ವಿದೇಶಿಗರು ಬುಕ್ಕಿಂಗ್‌ ರದ್ದುಗೊಳಿಸಿದರೆ, ಇದ್ದವರು ರೆಸಾರ್ಟ್‌ ಹಾಗೂ ಹೋಂ ಸ್ಟೇ ಖಾಲಿ ಮಾಡಿಕೊಂಡು ಅನ್ಯಪ್ರದೇಶಗಳತ್ತ ಮುಖ ಮಾಡಿದ್ದಾರೆ.

ದುಡಿಮೆಗೆ ಕುತ್ತು:

ಅಧಿಕಾರಿಗಳು ದಾಳಿ ನಡೆಸಿ 100ಕ್ಕೂ ಹೆಚ್ಚು ಅನಧಿಕೃತ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದಾರೆ. ಇದರಿಂದ ಪರವಾನಗಿ ಪಡೆದ ರೆಸಾರ್ಟ್‌ ನಡೆಸುವವರ ದುಡಿಮೆಗೂ ಕುತ್ತು ಬಂದಿದೆ. ಜತೆಗೆ ಗ್ಯಾಂಗ್‌ರೇಪ್‌ ಪ್ರಕರಣ ವಿದೇಶಿ ಮಾಧ್ಯಮಗಳಲ್ಲೂ ಬಿತ್ತರವಾಗಿರುವುದರಿಂದ ವರ್ಷದ ತುತ್ತಿಗೂ ಪೆಟ್ಟು ಬಿದ್ದಿದೆ ಎಂದು ರೆಸಾರ್ಟ್‌ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಸಾಣಾಪುರ ಸೇರಿದಂತೆ ವಿವಿಧ ಗ್ರಾಮಗಳ ಸನಿಹದಲ್ಲಿ ಅನಧಿಕೃತವಾಗಿದ್ದ ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ಮೇಲೆ ದಾಳಿ ನಡೆಸಿ ಕ್ರಮಕೈಗೊಳ್ಳಲಾಗಿದೆ. ಇದೀಗ ವಿದೇಶಿಗರು ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ತಹಸೀಲ್ದಾರ್‌ ನಾಗರಾಜ್‌ ಹೇಳಿದರು.

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತೆ ನಮ್ಮ ಸ್ಥಿತಿಯಾಗಿದೆ. ಏನೋ ರೆಸಾರ್ಟ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವು. ಈಗ ವಿದೇಶಿಯರಿಗೆ ರಕ್ಷಣೆ ಇಲ್ಲದೇ ಇರುವುದರಿಂದ ಇಂತಹ ಘಟನೆಗೆ ಕಾರಣವಾಗಿದೆ. ವಿದ್ಯುತ್ ಕಡಿತಗೊಳಿಸಿ ಕಗ್ಗತ್ತಲು ಮಾಡಿದ್ದಾರೆ ಎಂದು ರೆಸಾರ್ಟ್ ಮಾಲೀಕ ಹನುಮಹಳ್ಳಿ ಹೇಳಿದರು.