ಧಾರ್ಮಿಕ ವಿಚಾರ ಅರಿಯಲು ದೇಶಕ್ಕೆ ವಿದೇಶಿಗರ ಭೇಟಿ: ಮಧುರಾ ಮಂಜುನಾಥ್

| Published : Jan 01 2024, 01:15 AM IST

ಸಾರಾಂಶ

ಬಿಂತ್ರವಳ್ಳಿಯ ಪಾಲಚಂದ್ರ ಯಜ್ಞಕ್ಷೇತ್ರದ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ನರಸಿಂಹರಾಜಪುರದ ಎಂಕೆಸಿಪಿಎ ಪಿಯು ಕಾಲೇಜಿನ ಉಪನ್ಯಾಸಕಿ ಮಧುರಾ ಮಂಜುನಾಥ್ ಜಗತ್ತಿನ ಬೇರೆ ಬೇರೆ ದೇಶಗಳಿಂದ ಸಂಶೋಧನೆ, ಪ್ರಕೃತಿ ಸೌಂದರ್ಯ ಆಹ್ವಾದಿಸಲು, ಧಾರ್ಮಿಕ ವಿಚಾರ ತಿಳಿಯಲು ಪುರಾತನ ಕಾಲದಿಂದಲೂ ವಿದೇಶಿಗರು ನಮ್ಮ ದೇಶಕ್ಕೆ ಬರುತ್ತಿದ್ದರು ಎಂದು ತಿಳಿಸಿದರು.

ಬಿಂತ್ರವಳ್ಳಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಭಾರತ ಧಾರ್ಮಿಕತೆಯಲ್ಲಿ ಮುಂಚೂಣಿಯಲ್ಲಿರುವಂತೆಯೇ ವೈಜ್ಞಾನಿಕ ಸಂಶೋಧನೆಗಳಲ್ಲೂ ಸಾಧನೆ ಮಾಡಿದೆ ಎಂದು ನರಸಿಂಹರಾಜಪುರದ ಎಂಕೆಸಿಪಿಎ ಪಿಯು ಕಾಲೇಜಿನ ಉಪನ್ಯಾಸಕಿ ಮಧುರಾ ಮಂಜುನಾಥ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೊಪ್ಪ, ನರಸಿಂಹರಾಜಪುರ ತಾಲೂಕು, ಬಾಳಗಡಿ, ನುಗ್ಗಿ, ಹೊಸೂರು, ಕುದ್ರೆಗುಂಡಿ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಬಿಂತ್ರವಳ್ಳಿಯ ಪಾಲಚಂದ್ರ ಯಜ್ಞಕ್ಷೇತ್ರದ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ಶನಿವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಿದರು.

ಜಗತ್ತಿನ ಬೇರೆ ಬೇರೆ ದೇಶಗಳಿಂದ ಸಂಶೋಧನೆ, ಪ್ರಕೃತಿ ಸೌಂದರ್ಯ ಆಹ್ವಾದಿಸಲು, ಧಾರ್ಮಿಕ ವಿಚಾರ ತಿಳಿಯಲು ಪುರಾತನ ಕಾಲದಿಂದಲೂ ವಿದೇಶಿಗರು ನಮ್ಮ ದೇಶಕ್ಕೆ ಬರುತ್ತಿದ್ದರು. ಈಗಲೂ ಅದು ಮುಂದುವರಿದಿದೆ. ನಮ್ಮ ಭಾರತೀಯ ಸಂಸ್ಕೃತಿ ಇದಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಪ್ಲಾಸ್ಟಿಕ್ ಸರ್ಜರಿ ಕಂಡು ಹಿಡಿದ ಕೀರ್ತಿ ನಮ್ಮ ದೇಶಕ್ಕಿದೆ. ನಮ್ಮ ಪೂರ್ವಜರು ಭಕ್ತಿ ಮುಕ್ತಿ, ಧರ್ಮ ಯಾಗ ಗಳೊಂದಿಗೆ ಯಾಗದ ಹಲವು ಆಯಾಮಗಳನ್ನು ನಮಗೆ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಯೋಜನಾಧಿಕಾರಿ ನಿರಂಜನ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಡಾ.ವೀರೇಂದ್ರ ಹೆಗಡೆ ಮತ್ತು ಹೇಮಾವತಿ ವಿ. ಹೆಗಡೆಯವರ ಮಾರ್ಗದರ್ಶನದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಅನೇಕ ಮಾರ್ಗ ಗಳನ್ನು ಹಾಕಿಕೊಟ್ಟಿದೆ. ಇದರೊಂದಿಗೆ ಶಿಕ್ಷಣ ಆರೋಗ್ಯ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆ ಗಳಿಗೂ ಅವಕಾಶ ಕಲ್ಪಿಸಿದೆ. ಪ್ರಗತಿನಿಧಿಯಡಿ ಸಾಲ ಪಡೆದ ಸಂಘಗಳು ಮರುಪಾವತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದೆ. ಇದರಿಂದ ಬ್ಯಾಂಕುಗಳು ಒಂದು ಸಂಘಕ್ಕೆ 20 ಲಕ್ಷ ಸಾಲಸೌಲಭ್ಯ ನೀಡಲು ಮುಂದೆ ಬರುತ್ತಿವೆ. ತಾಲೂಕಿನ ಪ್ರತೀ ಸದಸ್ಯರು ವಾರಕ್ಕೆ 10, 20, 30 ರು.ಗಳಂತೆ ಮಾಡಿದ ಉಳಿತಾಯ ಈಗ 6.5 ಕೋಟಿಗಳಾಗಿವೆ ಎಂದರು.

ಶ್ರೀ ಸತ್ಯನಾರಾಯಣ ಪೂಜೆ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆದವು. ಉಪತಹಸೀಲ್ದಾರ್ ಶಿವರಾಮ್, ಬಾಳಗಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಸಂಜೀವ ಆಚಾರ್ಯ, ಬಿಂತ್ರವಳ್ಳಿ ಗ್ರಾಪಂ ಅಧ್ಯಕ್ಷೆ ವಿದ್ಯಾ, ನುಗ್ಗಿ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಹೊಸೂರು, ನುಗ್ಗಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕೆ. ಸತೀಶ್ ಕುಮಾರ್, ಜ್ಯೋತಿ, ಕುದ್ರೆಗುಂಡಿ ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.