ತುಮಕೂರಿನಲ್ಲಿ ದಲಿತರ ಅಂತ್ಯಸಂಸ್ಕಾರಕ್ಕೆ ಅರಣ್ಯ ಇಲಾಖೆ ತಗಾದೆ: ಶಾಸಕ ಸುರೇಶ್‌ ಗೌಡ ಪ್ರತಿಭಟನೆ ಬಳಿಕ ನೆರವೇರಿದ ಕಾರ್ಯ

| Published : Sep 23 2024, 01:29 AM IST / Updated: Sep 23 2024, 01:30 AM IST

ತುಮಕೂರಿನಲ್ಲಿ ದಲಿತರ ಅಂತ್ಯಸಂಸ್ಕಾರಕ್ಕೆ ಅರಣ್ಯ ಇಲಾಖೆ ತಗಾದೆ: ಶಾಸಕ ಸುರೇಶ್‌ ಗೌಡ ಪ್ರತಿಭಟನೆ ಬಳಿಕ ನೆರವೇರಿದ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡದೆ ತೊಂದರೆ ನೀಡಿದ ಇಲಾಖೆ ಮತ್ತು ಸರ್ಕಾರದ ವಿರುದ್ಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡ ಪ್ರತಿಭಟನೆ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಅರಣ್ಯ ಇಲಾಖೆ ತಗಾದೆ ತೆಗೆದು ದಲಿತರ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡದೆ ತೊಂದರೆ ನೀಡಿದ ಇಲಾಖೆ ಮತ್ತು ಸರ್ಕಾರದ ವಿರುದ್ಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡ ಪ್ರತಿಭಟನೆ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ಭಾನುವಾರ ನಡೆಯಿತು.1947-48ನೇ ಸಾಲಿನಿಂದ ಲಕ್ಷ್ಮಿದೇವಮ್ಮ ಎಂಬುವ ದಲಿತ ಮಹಿಳೆ ರಾಮಗೊಂಡನಹಳ್ಳಿಯಲ್ಲಿ ಉಳಿಮೆ ಮಾಡಿಕೊಂಡು ಬಂದಿದ್ದು 1990ರಲ್ಲಿ ಫಾರಂ ನಂಬರ್ 53ರಲ್ಲಿ ಸರ್ಕಾರಕ್ಕೆ ಬಗರಹುಕುಂ ಸಾಗುವಳಿ ಸಕ್ರಮೀಕರಣ ಯೋಜನೆ ಅಡಿಯಲ್ಲಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು.ಶಾಸಕ ಬಿ.ಸುರೇಶ್ ಗೌಡ ನೇತೃತ್ವದ ಬಗುರುಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯು ಸದರಿ ಅರ್ಜಿಯನ್ನು ಪರಿಶೀಲಿಸಿ ಎಲ್ಲ ಇಲಾಖೆಗಳಿಂದ ಎನ್‌ಓಸಿ ಪಡೆದು 2018ರಲ್ಲಿ 3 ಎಕರೆ 20 ಗುಂಟೆ ಜಮೀನನ್ನು ಸದರಿ ಅರ್ಜಿದಾರರಿಗೆ ಮಂಜೂರು ಮಾಡಿದೆ. ಸದರಿ ಮಂಜೂರಾತಿ ಅನ್ವಯ ತಹಸೀಲ್ದಾರ್ ಆರ್‌ಟಿಸಿಯಲ್ಲಿ ನಮೂದು ಮಾಡಿಕೊಡದೆ ವಿಳಂಬ ಮಾಡಿದ ನಿಮಿತ್ತವಾಗಿ ಅರ್ಜಿದಾರರು ಪಹಣಿಯಲ್ಲಿ ನಮೂದು ಮಾಡಿಕೊಡುವಂತೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನು ಮಾನ್ಯ ಮಾಡಿದ ಉಚ್ಚ ನ್ಯಾಯಾಲಯವು ತಹಸೀಲ್ದಾರ್‌ಗೆ ಕೂಡಲೇ ಪಹಣಿ ನಮೂದು ಮಾಡಿ ಕೊಡುವಂತೆ ಸೂಚಿಸಿ ಆದೇಶ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ, ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತೆ ಉಚ್ಛ ನ್ಯಾಯಾಲಯವು ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ವಿಚಾರಣೆ ಕೈಗೆತ್ತಿಕೊಂಡು ಸಾಧಕ ಬಾದಕಗಳ ಪರಿಶೀಲಿಸಿ ನಿರ್ಣಯ ಕೈಗೊಳ್ಳುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿತ್ತು. ಲಕ್ಷ್ಮಿ ದೇವಮ್ಮರ ತಾಯಿ ಮೃತಪಟ್ಟಿದ್ದು, ಮೃತ ವ್ಯಕ್ತಿಯನ್ನು ಅಂತ್ಯಸಂಸ್ಕಾರ ನೆರವೇರಿಸಲು ಹೋದಾಗ ಪೊಲೀಸ್ ಬಂದುಬಸ್ತ್‌ನೊಂದಿಗೆ ಬಂದ ಅರಣ್ಯ ಇಲಾಖೆಯವರು ಅಂತ್ಯಸಂಸ್ಕಾರ ನಡೆಸಲು ಬಿಟ್ಟಿಲ್ಲ. ಈ ವಿಷಯ ತಿಳಿದ ಶಾಸಕ ಬಿ ಸುರೇಶ್ ಗೌಡ ಕೂಡಲೇ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯವರ ವರ್ತನೆ ಹಾಗೂ ಪೊಲೀಸ್ ಸಿಬ್ಬಂದಿಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಆದರೂ ಕೂಡ ಅಂತ್ಯಸಂಸ್ಕಾರ ನಡೆಸಲು ಒಪ್ಪದ ಅರಣ್ಯ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಬಿ ಸುರೇಶ್ ಗೌಡ ಮೂಲ ದಾಖಲೆಗಳನ್ನು ಪರಿಶೀಲಿಸಿದರು. ದಾಖಲೆಗಳ ಅನ್ವಯ ಅರಣ್ಯ ಇಲಾಖೆಗೆ ಯಾವುದೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದಿಲ್ಲ. ಆದರೂ ಕೂಡ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿ ದಾಖಲೆಗಳನ್ನು ನೀಡಿ ಲಕ್ಷ್ಮಿದೇವಮ್ಮ ಅವರು ಮೂಲ ಮಾಲೀಕರಾಗಿರುವುದರಿಂದ ಹಾಗೂ ತಡೆಯಾಜ್ಞೆ ಇಲ್ಲದೆ ಇರುವುದನ್ನು ಮನವರಿಕೆ ಮಾಡಿ ಸದರಿ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದರು.ಈ ರೀತಿ ಪ್ರಕರಣಗಳು ಇಡೀ ರಾಜ್ಯದಾದ್ಯಂತ ಮರುಕಳಿಸುತ್ತಿದ್ದು, ಅರಣ್ಯ ಇಲಾಖೆಯವರಿಗೆ ಮತ್ತು ಸರ್ಕಾರಕ್ಕೆ ಶೋಭೆ ತರುವಂತಹ ಸಂಗತಿಯಲ್ಲ. ಧ್ವನಿ ಇಲ್ಲದೆ ಇರುವಂತ ದಲಿತರ ವಿಚಾರದಲ್ಲಿ ಅದು ತುಂಬಾ ನೋವಿನ ಸಂಗತಿ ಆಗಿರುವಂತಹ ಮೃತ ವ್ಯಕ್ತಿ ಅಂತ್ಯ ಸಂಸ್ಕಾರ ನೆರವೇರಿಸಲು ಜಾಗ ನೀಡದೆ ಆಟ ಆಡುತ್ತಿರುವ ಅರಣ್ಯ ಇಲಾಖೆಯ ಧೋರಣೆಯನ್ನು ಶಾಸಕ ಸುರೇಶಗೌಡ ಖಂಡಿಸಿದ್ದಾರೆ.