ಮಲೆ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಯಲ್ಲಿ ಭಕ್ತರ ಸುರಕ್ಷತೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆಯಿಂದ ವ್ಯಾಪಕ ಮುನ್ನೆಚ್ಚರಿಕ ಕ್ರಮವಹಿಸಿದೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಯಲ್ಲಿ ಭಕ್ತರ ಸುರಕ್ಷತೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆಯಿಂದ ವ್ಯಾಪಕ ಮುನ್ನೆಚ್ಚರಿಕ ಕ್ರಮವಹಿಸಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಜಾತ್ರೆ ಪ್ರಾರಂಭವಾಗಿದ್ದು, ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಸುರಕ್ಷತೆ ಹಾಗೂ ಅರಣ್ಯದಲ್ಲಿರುವ ವನ್ಯಜೀವಿಗಳ ಸಂರಕ್ಷಣೆಯ ಹಿತ ದೃಷ್ಟಿಯಿಂದ ಅರಣ್ಯ ಇಲಾಖೆಯ ವತಿಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಚಿರತೆಗಳ ಚಲನವಲನದಿಂದಾಗಿ ಕೆಲವು ಅಹಿತಕರ ಘಟನೆಗಳು ಸಂಭವಿಸಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಅಂತಹ ದುರ್ಘಟನೆಗಳು ಮರುಕಳಿಸದಂತೆ ಮುಂಚಿತವಾಗಿಯೇ ಸಮಗ್ರ ಕಾರ್ಯಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಳಬೆಟ್ಟದಿಂದ ಆನೆತಲೆದಿಂಬದವರೆಗೆ ಸುಮಾರು 7 ಕಿ.ಮೀ. ಉದ್ದದ ಅರಣ್ಯ ಪ್ರದೇಶದ ಮೂಲಕ ಕಾಲ್ನಡಿಗೆಯಲ್ಲಿ ಹಾದುಹೋಗುವ ಮೆಟ್ಟಿಲು ಮಾರ್ಗವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಈ ಭಾಗವು ವನ್ಯಪ್ರಾಣಿಗಳ ಸ್ವಾಭಾವಿಕ ಆವಾಸಸ್ಥಾನ ಮತ್ತು ಸಂಚಾರ ಮಾರ್ಗವಾಗಿದೆ. ಆದ್ದರಿಂದ ಭಕ್ತಾದಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಳೆದ ವರ್ಷದಂತೆಯೇ ಪಾದಯಾತ್ರೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿದೆ.

ಪಾದಯಾತ್ರೆಗೆ ನಿಗದಿಪಡಿಸಿದ ಸಮಯ:

ಭಕ್ತಾದಿಗಳು ಬೆಳಿಗ್ಗೆ 7 ಗಂಟೆಯ ನಂತರ ಹಾಗೂ ಸಂಜೆ 4 ಗಂಟೆವರಗೆ ಮಾತ್ರ ತಾಳಬೆಟ್ಟದಿಂದ ಪಾದಯಾತ್ರೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ 4 ಗಂಟೆಯ ನಂತರ ತಾಳಬೆಟ್ಟದಿಂದ ಪಾದಯಾತ್ರೆಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ಈ ಸಮಯದ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ವಿನಂತಿಸಲಾಗಿದೆ.

ಅರಣ್ಯ ಇಲಾಖೆಯಿಂದ ಏಳು ವಿಶೇಷ ಗಸ್ತು ತಂಡಗಳ ನಿಯೋಜನೆ ಮಾಡಲಾಗಿದ್ದು, ಅತೀ ಸೂಕ್ಷ್ಮ ಮಾರ್ಗದಲ್ಲಿ ನಿರಂತರ ನಿಗಾ ವಹಿಸಲು ಅರಣ್ಯ ಇಲಾಖೆಯ ವತಿಯಿಂದ ಒಟ್ಟು ಏಳು ವಿಶೇಷ ಗಸ್ತು ತಂಡಗಳನ್ನು ರಚಿಸಲಾಗಿದೆ.

ಅರಣ್ಯ ಪ್ರದೇಶದಲ್ಲಿ ಆಹಾರ, ಪಾನೀಯ ವಿತರಣೆ ನಿಷೇಧ:

ಜಾತ್ರೆಯ ಸಂದರ್ಭದಲ್ಲಿ ಕೆಲವು ದಾನಿಗಳು ಭಕ್ತಾದಿಗಳಿಗೆ ನೀರಿನ ಬಾಟಲಿ, ಮಜ್ಜಿಗೆ ಪ್ಯಾಕೆಟ್ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಅರಣ್ಯದ ಮಧ್ಯಭಾಗದಲ್ಲಿ ವಿತರಿಸುವ ಪದ್ಧತಿ ಇದೆ. ಈ ಬಾರಿ ಅರಣ್ಯ ಪ್ರದೇಶದೊಳಗೆ ಇಂತಹ ವಿತರಣೆಗೆ ಅವಕಾಶ ನೀಡಲಾಗುವುದಿಲ್ಲ. ಭಕ್ತಾದಿಗಳಿಗೆ ಆಹಾರ ಮತ್ತು ಪಾನೀಯಗಳನ್ನು ತಾಳಬೆಟ್ಟ ಅಥವಾ ಅರಣ್ಯದ ಹೊರಭಾಗದಲ್ಲಿರುವ ಗ್ರಾಮಗಳಂತಹ ನಿಗದಿತ ಸ್ಥಳಗಳಲ್ಲಿ ಮಾತ್ರ ವಿತರಿಸಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.

ಭಕ್ತಾದಿಗಳು ಪ್ಲಾಸ್ಟಿಕ್ ಬಾಟಲಿ, ಕವರ್ ಹಾಗೂ ಇತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಕಸದ ತೊಟ್ಟಿಗಳಲ್ಲಿ ಮಾತ್ರ ಹಾಕಬೇಕು. ಪ್ಲಾಸ್ಟಿಕ್ ತ್ಯಾಜ್ಯವು ವನ್ಯಪ್ರಾಣಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗುವುದಲ್ಲದೆ, ಅರಣ್ಯದ ಪರಿಸರ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಕೊಳ್ಳೇಗಾಲ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಹೇಳಿದ್ದಾರೆ.