ಸುಪ್ರೀಂ ಆದೇಶ ಪಾಲಿಸುತ್ತಿಲ್ಲ ಅರಣ್ಯಇಲಾಖೆ

| Published : Apr 17 2025, 12:01 AM IST

ಸಾರಾಂಶ

ಬಂಡೀಪುರ ಪರಿಸರ ಸೂಕ್ಷ್ಮ ವಲಯದಂಚಿನ ಖಾಸಗಿ ರೆಸಾರ್ಟ್‌ವೊಂದು ಕಣ್ಣು ಕುಕ್ಕುವ ಲೈಟ್‌ ಅನ್ನು ಕಾಡಿನತ್ತ ಬಿಟ್ಟಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ದೇಶದ ಸರ್ವೋಚ್ಛ ನ್ಯಾಯಾಲಯ (ಸುಪ್ರೀಂ ಕೋರ್ಟ್‌)ದ ಆದೇಶದ ಪ್ರಕಾರ ಹುಲಿ ಯೋಜನಾ ಪ್ರದೇಶಗಳಿಂದ ಪ್ರಸಕ್ತ ಪ್ರವಾಸೋದ್ಯಮ ಸೌಲಭ್ಯಗಳನ್ನು ಹಂತ ಹಂತವಾಗಿ ತೆಗೆಯಬೇಕು ಎಂದು ಹೇಳಿದೆ.ಆದರೆ, ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಪರಿಸರ ಸೂಕ್ಷ್ಮ ವಲಯಗಳಲ್ಲಿ ಚಲನಚಿತ್ರಗಳಿಗೆ ಅನುಮತಿ ನೀಡುತ್ತಿರುವುದು, ಹೋಂ ಸ್ಟೇ ಹಾಗೂ ವಾಸದ ಮನೆ ಹೆಸರಲ್ಲಿ ವಾಣಿಜ್ಯ ಚಟುವಟಿಕೆ, ಅನುಮತಿ ಪಡೆದದ್ದಕ್ಕಿಂತ ಹೆಚ್ಚು ಅಕ್ರಮ ಕಟ್ಟಡಗಳು ಸದ್ದಿಲ್ಲದೆ ತಲೆ ಎತ್ತಿರುವ ಬಗ್ಗೆ ಮೌನ ವಹಿಸಿರುವುದನ್ನು ಗಮನಿಸಿದರೆ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಬೆಲೆ ಸಿಗುತ್ತಿಲ್ಲ.?ಸ್ಥಳಾಂತರ ಆಗಿವೆ? ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಹುಲಿ ಯೋಜನಾ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಸೌಲಭ್ಯ ಒಂದೇ ಸಲ ಅಲ್ಲ, ಹಂತ ಹಂತವಾಗಿ ತೆಗೆಯಬೇಕು ಎಂದು ಹೇಳಿದ ಪರಿಣಾಮ ಬಂಡೀಪುರ ಕ್ಯಾಂಪಸ್‌ನಲ್ಲಿ ಸಫಾರಿ ಕೇಂದ್ರ ಮೇಲುಕಾಮನಹಳ್ಳಿ ಬಳಿ ಸ್ಥಳಾಂತರ ಆಗಿದೆ. ಅದೇ ರೀತಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರ ಕಚೇರಿಯೂ ಮೇಲುಕಾಮನಹಳ್ಳಿ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಆದರೆ ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ವಾಸದ ಮನೆ ಹಾಗೂ ಹೋಂಸ್ಟೇ ಹೆಸರಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ಅರಣ್ಯ ಇಲಾಖೆಯ ಮೂಗಿನ ತುದಿಯಲ್ಲಿ ನಡೆಯುತ್ತಿದ್ದರೂ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.ಪರಿಸರ ಸೂಕ್ಷ್ಮ ಪರಿಸರ ವಲಯದ ಮೇಲುಕಾಮನಹಳ್ಳಿ ಬಳಿ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಅಂಗಡಿ, ಮುಂಗಟ್ಟುಗಳ ವ್ಯಾಪಾರ ನಡೆಯುತ್ತಿವೆ. ಅಲ್ಲದೆ ಹಂಗಳದ ತನಕ ಪರಿಸರ ಸೂಕ್ಷ್ಮ ವಲಯ ಎಂದಿದೆ. ಆದರೂ ಇಲ್ಲಿ ಹೋಟೆಲ್‌, ಲಾಡ್ಜ್‌ ತಲೆ ಎತ್ತಿವೆ. ಅನುಮತಿ ಹೆಸರಲ್ಲಿ ಹೆಚ್ಚುವರಿ ಕಟ್ಟಡಗಳು, ವಾಸದ ಮನೆ ಹೆಸರಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳು ಹಾಗೂ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂಗಡಿ, ಮುಂಗಟ್ಟುಗಳು, ಟೀ ಕ್ಯಾಂಟೀನ್‌, ಬೇಕರಿಗಳು ಎಗ್ಗಿಲ್ಲದೆ ಪರಿಸರ ಸೂಕ್ಷ್ಮ ವಲಯಗಳ ಅಂಚಿನಲ್ಲಿ ನಡೆಯುತ್ತಿವೆ. ಇತ್ತ ಅರಣ್ಯ ಇಲಾಖೆ ಕಣ್ಣೆತ್ತಿ ನೋಡುತ್ತಿಲ್ಲ ಎಂದು ಪರಿಸರ ಪ್ರೇಮಿ ಶರತ್‌ ಹೇಳಿದ್ದಾರೆ.ಇತ್ತೀಚೆಗೆ ರಾಜ್ಯ ಸರ್ಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ಅತೀ ಪರಿಸರ ಸೂಕ್ಷ್ಮ ವಲಯದಲ್ಲಿ ಕೇರಳ ಭಾಷೆಯ ಸಿನಿಮಾಗೆ ಅನುಮತಿ ಕೊಡುವುದಕ್ಕಿಂತ ಮುನ್ನವೇ ಚಿತ್ರೀಕರಣ ನಡೆದಿದೆ ಎಂದರೆ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ರಕ್ಷಣೆ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ.ಏ.8 ರಂದು ಬೆಳ್ಳಂಬೆಳಗ್ಗೆಯೇ ಕೇರಳ ಭಾಷೆಯ ಸಿನಿಮಾ ತಂಡ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಮೇತ ಭೇಟಿ ನೀಡಿ ಚಿತ್ರೀಕರಣ ನಡೆಸಿದೆ. ಅದು ಮುಜರಾಯಿ ಇಲಾಖೆಯ ಅನುಮತಿ ಇಲ್ಲದೇ? ಅರಣ್ಯ ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡುವ ಮೂಲಕ ಪರಿಸರವಾದಿಗಳ ಆಕ್ರೋಶಕ್ಕೆ ಅರಣ್ಯ ಇಲಾಖೆ ತುತ್ತಾಗಿದೆ. ಸುಪ್ರೀಂ ಆದೇಶದ ಪ್ರಕಾರ ವಾಣಿಜ್ಯ ಚಲನಚಿತ್ರಗಳಿಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಈ ತರಹದ ಚಲನಚಿತ್ರಗಳಿಂದ ಈ ಪ್ರದೇಶಗಳಿಗೆ ಅತಿಯಾದ ಪ್ರಚಾರ ಸಿಕ್ಕಿ ಪ್ರವಾಸಿಗರು ಹೆಚ್ಚುತ್ತಾರೆ. ಇದರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಆಗುವ ಹಾನಿ ಇನ್ನೂ ಹೆಚ್ಚಿನದು ಎಂದು ಹೆಸರೇಳಲಿಚ್ಛಿಸದ ವನ್ಯಜೀವಿ ತಜ್ಞರೊಬ್ಬರು ಹೇಳಿದ್ದಾರೆ.