ಸಾರಾಂಶ
ಬೇಸಿಗೆಯ ಬೇಗೆಯಿಂದ ಹಳಿಯಾಳ ಅರಣ್ಯ ವಿಭಾಗದ ಕಾಡು ಸಂಪೂರ್ಣವಾಗಿ ಒಣಗಿ, ಕಾಡಿನಲ್ಲಿರುವ ಕೆರೆಗಳು, ನೀರಿನ ಝರಿಗಳು ಬತ್ತಿ ಹೋಗುತ್ತಿವೆ.
ಹಳಿಯಾಳ: ಬೇಸಿಗೆಯ ಬೇಗೆಯಿಂದ ಹಳಿಯಾಳ ಅರಣ್ಯ ವಿಭಾಗದ ಕಾಡು ಸಂಪೂರ್ಣವಾಗಿ ಒಣಗಿ, ಕಾಡಿನಲ್ಲಿರುವ ಕೆರೆಗಳು, ನೀರಿನ ಝರಿಗಳು ಬತ್ತಿ ಹೋಗುತ್ತಿವೆ. ವನ್ಯ ಪ್ರಾಣಿ-ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಹಳಿಯಾಳ ಅರಣ್ಯ ವಿಭಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾರಂಭಿಸಿದೆ.
ಈ ಬಾರಿಯ ಅತಿಯಾದ ಬಿಸಿಲು ಹಾಗೂ ಒಣ ಹವೆಯಿಂದಾಗಿ ಕಾಡಿನಲ್ಲಿನ ಜಲಮೂಲಗಳು ಬತ್ತಿ ಹೋಗಲಾರಂಭಿಸಿವೆ. ಈ ಜಲಮೂಲಗಳ ಬಳಿ ಹಾಗೂ ಇತರೆಡೆ ಅಲ್ಲಲ್ಲಿ ಸಿಮೆಂಟಿನ ಟ್ಯಾಂಕ್‌ಗಳನ್ನು ನಿರ್ಮಿಸಿರುವ ಅರಣ್ಯ ಇಲಾಖೆ, ಈ ಟ್ಯಾಂಕ್‌ಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯ ಮಾಡಲಾರಂಭಿಸಿದೆ. ಟ್ಯಾಂಕ್‌ಗಳನ್ನು ಪರಿಶೀಲಿಸಿ, ಹದಿನೈದು ದಿನಗಳಿಗೊಮ್ಮೆ ನೀರು ತುಂಬಿಸುವ ಕಾರ್ಯ ಮುಂದುವರಿಯಲಿದೆ.ಆರಂಭದಲ್ಲಿ ಹಳಿಯಾಳ ಅರಣ್ಯ ವಲಯದಲ್ಲಿ 20, ಸಾಂಬ್ರಾಣಿ ಅರಣ್ಯ ವಲಯದಲ್ಲಿ 9 ಹಾಗೂ ಭಾಗವತಿ ಅರಣ್ಯ ವಲಯದಲ್ಲಿ 5 ಕಡೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಇನ್ನೂ ಮುಂದಿನ ತಿಂಗಳು ಮಳೆ ಬರದೇ ಇದ್ದಲ್ಲಿ ಅರಣ್ಯ ಇಲಾಖೆ ಟ್ಯಾಂಕ್‌ಗಳ ಸಂಖ್ಯೆ ಹೆಚ್ಚಿಸುವ ಕಾರ್ಯಯೋಜನೆ ಸಿದ್ಧಪಡಿಸಿದೆ. ಬಿರುಬಿಸಿಲಿನ ಬೇಗೆಯಿಂದ ನೀರನ್ನು ಅರಸಿ ವನ್ಯಪ್ರಾಣಿಗಳು ಗ್ರಾಮದಂಚಿಗೆ ಬಂದರೆ ಬೆದರಿಸದಂತೆ, ಪ್ರಾಣಹಾನಿ ಮಾಡದಂತೆ ಸಾರ್ವಜನಿರಕಿಗೆ ಮನವಿಯನ್ನೂ ಮಾಡಿದೆ.
ಕಾಡಂಚಿನ ಗ್ರಾಮಸ್ಥರು, ಕಾಡಂಚಿನಲ್ಲಿ ಕೃಷಿ ಜಮೀನುಗಳನ್ನು ಹೊಂದಿರುವ ರೈತರು ಹಾಗೂ ಜನಸಾಮಾನ್ಯರು ವನ್ಯಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ವ್ಯವಸ್ಥೆ ಮಾಡಬೇಕು. ಮನೆಯ ಬಳಿ ಅಥವಾ ಹೊಲಗಳಲ್ಲಿ ಅಥವಾ ಕೊಟ್ಟಿಗೆಯ ಬಳಿ ನೀರಿನ ತೊಟ್ಟಿಯಿಟ್ಟು ನೀರು ತುಂಬಿಸಬೇಕು. ಈ ಕಾರ್ಯದಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು.ಬಸವರಾಜ ಎಂ. ಹಳಿಯಾಳ ವಲಯ ಅರಣ್ಯಾಧಿಕಾರಿ