ಬೀರೂರುಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಾ ಮನುಷ್ಯರಷ್ಟೇ ಅಲ್ಲದೇ ಮೂಕಪ್ರಾಣಿಗಳನ್ನುಸಹ ದಾಹದಿಂದ ಹೈರಾಣಾಗಿಸುತ್ತಿದೆ.
ಬಾಸೂರು ಅಮೃತ್ ಮಹಲ್ ಕಾವಲು ಅಪರೂಪದ ಕಪ್ಪುಸುಂದರಿ (ಕೃಷ್ಣಮೃಗ) ಸಂರಕ್ಷಿತಾ ಪ್ರದೇಶ
ಕನ್ನಡಪ್ರಭ ವಾರ್ತೆ,ಬೀರೂರುಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಾ ಮನುಷ್ಯರಷ್ಟೇ ಅಲ್ಲದೇ ಮೂಕಪ್ರಾಣಿಗಳನ್ನುಸಹ ದಾಹದಿಂದ ಹೈರಾಣಾಗಿಸುತ್ತಿದೆ. ತಾಲೂಕಿನ ಬಾಸೂರು ಅಮೃತ್ ಮಹಲ್ ಕಾವಲು ಪ್ರದೇಶದಲ್ಲಿರುವ ಅಪರೂಪದ ಕಪ್ಪುಸುಂದರಿ (ಕೃಷ್ಣಮೃಗ) ಸಂರಕ್ಷಿತಾ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾದ ಪರಿಣಾಮ ಕೊಳವೆ ಬಾವಿಯಿಂದ ಟ್ಯಾಂಕರ್ ಮೂಲಕ ಗೋಕಟ್ಟೆಗಳಿಗೆ ನೀರುಣಿಸಲಾಗುತ್ತಿದೆ.
ಈಗಾಗಲೇ ಕಾದ ಕೆಂಡಂತಾಗುತ್ತಿರುವ ಭೂಮಿಗೆ ಈ ಭಾಗದ ಕೆರೆಕಟ್ಟೆಗಳು ಬತ್ತುತ್ತಿದ್ದು, ಕಾವಲು ಪ್ರದೇಶದ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆ ಇಲ್ಲದೆ ಬರಡಾಗಿದೆ. ಇತ್ತ ಹಸಿರಿನ ಪರಿಸರ ಇಲ್ಲದಿರುವುದು ಕೃಷ್ಣ ಮೃಗಗಳ ಪಾಲಿಗೆ ಸಂಕಷ್ಟ ತಂದೊಡ್ಡಿದ್ದು ಅರಣ್ಯ ಇಲಾಖೆ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದೆ.ರಾಜ್ಯದ ರಾಣಿಬೆನ್ನೂರು ಭಾಗದಲ್ಲಿ ಹೊರತುಪಡಿಸಿದರೆ ರಾಜ್ಯದಲ್ಲೇ ಅತಿಹೆಚ್ಚು ಕೃಷ್ಣಮೃಗಗಳನ್ನು ಹೊಂದಿರುವ ಪ್ರದೇಶ ಕಡೂರು ತಾಲೂಕಿನ ಹೆಗ್ಗಳಿಕೆಯಾಗಿದೆ. ಸುಮಾರು 1800ಎಕರೆ ವಿಸ್ತೀರ್ಣ ಹೊಂದಿರುವ ಬಾಸೂರು ಕಾವಲು ಪ್ರದೇಶದಲ್ಲಿ ಈ ಬಾರಿ ಸೂರ್ಯನ ಪ್ರಖರತೆಗೆ ಇಲ್ಲಿನ ಚಿತ್ರಣವೇ ಬದಲಾಗಿದೆ. ಅರಣ್ಯದೊಳಗಿನ ನೈಸರ್ಗಿಕ ನೀರಿನ ಮೂಲಗಳು ಬತ್ತಿ ಹೋಗಿದ್ದು, ಐನೂರಕ್ಕೂ ಅಧಿಕ ಕೃಷ್ಣ ಮೃಗಗಳು ಹನಿ ನೀರಿಗಾಗಿ ಅಲೆದಾಡುವಂತಾಗಿದೆ.ಈ ಹಿನ್ನೆಲೆಯಲ್ಲಿ ಪ್ರದೇಶದ ವ್ಯಾಪ್ತಿಯ ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ನೀರು ಸರಬರಾಜು ಮಾಡುವ ಮೂಲಕ ನೀರಿನ ದಾಹ ತಣಿಸಲು ಮುಂದಾಗಿದ್ದಾರೆ.-- ಕೋಟ್--
ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವುದರಿಂದ ವನ್ಯಜೀವಿಗಳು ನೀರಿನ ದಾಹದಿಂದ ಸಾವನ್ನಪ್ಪಬಾರದು ಎಂಬ ಮುನ್ನೆಚ್ಚರಿಕೆ ಕ್ರಮ ವಹಿಸಿ ಬಾಸೂರು ಕಾವಲು ಪ್ರದೇಶದಲ್ಲಿರುವ 15 ಕಟ್ಟೆಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಕಟ್ಟೆಯ ನೀರು ಖಾಲಿಯಾಗುತ್ತಿದ್ದಂತೆ ನೀರುಣಿಸಲಾಗುತ್ತದೆ. ಬೇಸಿಗೆ ದಿನಗಳಲ್ಲಿ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಕಾಡದಂತೆ ಕ್ರಮವಹಿಸಲಾಗಿದೆ.- ಹರೀಶ್, ತಾಲೂಕು ವಲಯಾರಣ್ಯಾಧಿಕಾರಿ, ಕಡೂರು
26ಬೀರೂರು 1ಕಡೂರು ತಾಲೂಕಿನ ಬಾಸೂರು ಅಮೃತ್ ಮಹಲ್ ಕಾವಲು ಪ್ರದೇಶದ ಕಟ್ಟೆಗಳಿಗೆ ಕೃಷ್ಣಮೃಗಗಳಿಗೆ ನೀರುಣಿಸಲು ಟ್ಯಾಂಕರ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ನೀರು ಸರಬರಾಜು ಮಾಡುತ್ತಿರುವುದು