ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ವಸಂತಪುರ ಗ್ರಾಮದಲ್ಲಿ ಹೆಚ್ಚಿರುವ ಕೋತಿಗಳ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟು ಹಿಡಿಯಲು ಮುಂದಾದರು.ಕಳೆದ ಎರಡು ವರ್ಷಗಳಿಂದ ನೂರಾರು ಕೋತಿಗಳು ಗ್ರಾಮದಲ್ಲಿ ಬೀಡುಬಿಟ್ಟು ಮನೆಗಳ ಹೆಂಚು ತೆಗೆದು ಮನೆಯೊಳಗಡೆ ಇಳಿದು, ದಿನೋಪಯೋಗಿ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಓಡಿ ಹೋಗುತ್ತಿದ್ದವು.
ಈ ಹಿನ್ನೆಲೆಯಲ್ಲಿ ಬೇಸತ್ತಿದ್ದ ಗ್ರಾಮಸ್ಥರು ಕೋತಿಗಳನ್ನು ಹಿಡಿದು ಹೊರ ಬಿಟ್ಟು ಗ್ರಾಮದಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ಮಾಡಿದ್ದರು.ಕೋತಿಗಳ ದಾಂಧಲೆ ಹಿನ್ನೆಲೆಯಲ್ಲಿ ವಸಂತಪುರ ಗ್ರಾಮಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೋತಿಗಳನ್ನು ಹಿಡಿದು ಗ್ರಾಮದಿಂದ ಹೊರಗಡೆ ಬಿಡಿಸುವ ಭರವಸೆ ನೀಡಿದ್ದರು.
ಅಲ್ಲದೇ, ಕೆ.ಆರ್.ಪೇಟೆ ತಾಲೂಕು ವಲಯ ಅರಣ್ಯ ಅಧಿಕಾರಿ ಅನಿತಾ ಪ್ರವೀಣ್ ಅವರಿಗೆ ಶಾಸಕರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಿಂದ ಕೋತಿ ಹಿಡಿಯುವಲ್ಲಿ ಪರಿಣಿತರಾಗಿರುವ ಕೃಷ್ಣಪ್ಪ ಮತ್ತು ರಾಮಕೃಷ್ಣ ಅವರ ನೇತೃತ್ವದ ತಂಡವನ್ನು ಕರೆಸಿದ್ದಾರೆ.ಈ ವೇಳೆ ಕೃಷ್ಣಪ್ಪ ಮಾತನಾಡಿ, ಗ್ರಾಮದಲ್ಲಿ ಕೋತಿಗಳು ದಾಂಧಲೆ ನಡೆಸಿ ಶ್ರೀಸಾಮಾನ್ಯರು, ಮಹಿಳೆಯರು, ಶಾಲಾ ಮಕ್ಕಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ನಿರ್ದೇಶನದಂತೆ ಕೋತಿಗಳನ್ನು ಸುರಕ್ಷಿತವಾಗಿ ಹಿಡಿದು ಅವುಗಳನ್ನು ಮತ್ತೆ ಅರಣ್ಯಕ್ಕೆ ಬಿಡುವ ನಿಟ್ಟಿನಲ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ಬೋನುಗಳನ್ನು ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆದರೆ, ಕೋತಿಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲು ಪರಿಣಿತರ ತಂಡದ ಆಗಮಿಸಿದರೂ ಕೋತಿಗಳು ಮಾತ್ರ ಶಾಲಾ ಅವರಣಕ್ಕೆ ಆಗಮಿಸಲು ಸತಾಯಿಸುತ್ತಿವೆ. ಗ್ರಾಮದ ತೋಟದೊಳಗೆ ನುಗ್ಗಿ ಚಳ್ಳೆಹಣ್ಣು ತಿನ್ನಿಸುತ್ತಿವೆ.ತಾಲೂಕು ವಲಯ ಅರಣ್ಯಾಧಿಕಾರಿ ಅನಿತಾಪ್ರವೀಣ್ ಮಾತನಾಡಿ, ಗ್ರಾಮದಲ್ಲಿ ಕೋತಿಗಳು ಕಳೆದ 6 ತಿಂಗಳಿಂದ ದಾಂಧಲೆ ನಡೆಸಿತೊಂದರೆ ನೀಡುತ್ತಿರುವ ಬಗ್ಗೆ ಶಾಸಕರು ತಿಳಿಸಿದ್ದು, ಕೋತಿಗಳನ್ನು ಹಿಡಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಕಾರ್ಯಾಚರಣೆ ನಡೆಸಲಾಗುವುದು. ಒಂದೆರಡು ದಿನಗಳಲ್ಲಿ ಗ್ರಾಮದ ಎಲ್ಲಾ ಕೋತಿಗಳನ್ನು ಹಿಡಿಸಿ ಮರಳಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.