ಸಾರಾಂಶ
ಶಿರಸಿ: ನೆಗ್ಗು ಗ್ರಾಪಂ ವ್ಯಾಪ್ತಿಯ ೧೭ ಭಾಗಗಳಲ್ಲಿ ಮನೆಗಳ ಮತ್ತು ಕೃಷಿ ಭೂಮಿಗಳ ಮೇಲೆ ಮರ ಬಿದ್ದು ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಪಂಚಾಯಿತಿಯಿಂದ ಪಟ್ಟಿ ಸಿದ್ಧಪಡಿಸಿ ಅರಣ್ಯ ಇಲಾಖೆಗೆ ಸಲ್ಲಿಸಿದ್ದೇವೆ. ಈ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅನಗತ್ಯ ವಿಳಂಬ ಮಾಡುತ್ತಿದ್ದು, ತಕ್ಷಣವೇ ಮರ ತೆರವಿಗೆ ಅನುಮತಿ ನೀಡಬೇಕು ಎಂದು ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಆಗ್ರಹಿಸಿದರು.ಮಂಗಳವಾರ ತಾಲೂಕಿನ ನೆಗ್ಗು ಪ್ರೌಢಶಾಲೆ ಆವರಣದಲ್ಲಿ ನಡೆದ ನೆಗ್ಗು ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದ ಪ್ರಮುಖ ಶ್ರೀಪಾದ ನಾಯ್ಕ ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಮಾತನಾಡಿದ ಲಾಝರ್ ರೆಬೆಲ್ಲೋ, ಈ ಮಳೆಗಾಲದಲ್ಲಿ ಅತಿ ಹೆಚ್ಚು ವಿದ್ಯುತ್ ಸಮಸ್ಯೆ ಉಂಟಾಗಿದೆ. ಇದಕ್ಕೆ ಹೆಸ್ಕಾಂ ಒಂದೇ ಕಾರಣವಾಗುವುದಿಲ್ಲ. ವಿದ್ಯುತ್ ತಂತಿಯ ಸಮೀಪ ಇರುವ ಅಕೇಶಿಯಾ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹೆಸ್ಕಾಂಗೆ ಸಹಕಾರ ನೀಡಬೇಕಿತ್ತು. ಇನ್ನಾದರೂ ಸಾರ್ವಜನಿಕರ ಸಮಸ್ಯೆಗಳಿಗೆ ಇಲಾಖೆಗಳು ಸ್ಪಂದಿಸಬೇಕು ಎಂದರು.ಇಲ್ಲಿಯ ನಿವಾಸಿಗಳಾದ ಗಜಾನನ ಹೆಗಡೆ ದೊಡ್ಮನೆ ಇತರರು, ಪಂಚಾಯಿತಿ ವ್ಯಾಪ್ತಿಯ ಬೊಪ್ನಳ್ಳಿ, ಹಲಸಿನಹಳ್ಳಿ, ಬೊಪ್ನಳ್ಳಿ, ನೇರ್ಲವಳ್ಳಿ ಸೇರಿದಂತೆ ೬ಕ್ಕೂ ಅಧಿಕ ಶಾಲೆಗಳ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಮಳೆಗಾಲದ ಈ ದಿನಗಳಲ್ಲಿ ಈ ಶಾಲೆಯ ಕೊಠಡಿಗಳಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಕೇಳಲು ಭಯ ಪಡುವಂತಾಗಿದೆ. ಸಮಸ್ಯೆ ಹೇಳಿಕೊಳ್ಳೋಣ ಎಂದರೆ ಶಿಕ್ಷಣ ಇಲಾಖೆ ಪ್ರಮುಖರು ಗ್ರಾಮ ಸಭೆಗೆ ಬರುತ್ತಿಲ್ಲ. ಮಕ್ಕಳಿಗೆ ಮೊಟ್ಟೆ, ಚಿಕ್ಕಿ ನೀಡುವ ಇಲಾಖೆ ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ನೀಡುತ್ತಿಲ್ಲ ಎಂದರು. ಸದಸ್ಯ ಗಣೇಶ ಎಚ್.ವಿ. ಅವರು, ಆರೋಗ್ಯ ಇಲಾಖೆ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಹನುಮಂತಿಯಲ್ಲಿ ಆರೋಗ್ಯ ಇಲಾಖೆಯ ಸಬ್ ಸೆಂಟರ್ ಇದ್ದರೂ ಇಲ್ಲಿ ಸಿಬ್ಬಂದಿಯೇ ಸಿಗುವುದಿಲ್ಲ. ಇರುವ ಸಿಬ್ಬಂದಿಯನ್ನೂ ಪದೇ ಪದೇ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆಸಿಕೊಳ್ಳುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಹನುಮಂತಿ ಸಬ್ ಸೆಂಟರ್‌ನಲ್ಲಿ ಓರ್ವ ನರ್ಸ್ ಸದಾ ಇರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಸದಸ್ಯ ಚಂದ್ರಕಾಂತ ಹೆಗಡೆ ನೇರ್ಲದ್ದ ಮಾತನಾಡಿ, ಕೊಳಗಿಬೀಸ್‌ನಿಂದ ಸರ್ಕುಳಿವರೆಗಿನ ಪ್ರದೇಶದ ಬಸ್ ಸ್ಟಾಪ್‌ಗಳು ಬಾರ್‌ಗಳಂತಾಗಿದೆ. ನಗರದಿಂದ ಮದ್ಯ ಖರೀದಿಸಿ ತರುವ ಅನೇಕರು ಈ ಬಸ್ ಸ್ಟಾಪ್‌ಗಳಲ್ಲಿ ಕುಳಿತು ಮದ್ಯದ ಪಾರ್ಟಿ ನಡೆಸಿ ಮುಂದೆ ಹೋಗುತ್ತಿದ್ದಾರೆ. ಇದರಿಂದಾಗಿ ಇಲ್ಲಿ ಸಾರ್ವಜನಿಕರ ಸಂಚಾರಕ್ಕೂ ಭಯ ಮೂಡುವ ವಾತಾವರಣವಿದೆ. ಪೊಲೀಸ್ ಇಲಾಖೆ ರಾತ್ರಿಯ ವೇಳೆ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಹರೆ ನಡೆಸುವ ಅಗತ್ಯತೆ ಇದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೇಶವಮೂರ್ತಿ ಉಮ್ಮಡಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸದಸ್ಯರಾದ ಸುರೇಶ ಹೆಗಡೆ, ನಾಗವೇಣಿ ಆಚಾರಿ, ಕೃಷ್ಣ ಗೌಡ, ಪಿಡಿಒ ಮಮತಾ ಗುಡ್ಡದಮನೆ ಮತ್ತಿತರರು ಇದ್ದರು.