ಅರಣ್ಯವಾಸಿಗಳ ಬೃಹತ್‌ ಕಾನೂನು ಜಾಗೃತಿ ಜಾಥಾ

| Published : Apr 09 2025, 12:34 AM IST

ಸಾರಾಂಶ

ಪ್ರಸ್ತುತ ಜಾರಿಯಲ್ಲಿರುವ ಕಾನೂನು, ಅನುಷ್ಠಾನಕ್ಕಾಗಿ ಹೋರಾಟ

ಅಂಕೋಲಾ: ಅರಣ್ಯ ಭೂಮಿ ಹಕ್ಕಿಗಾಗಿ ಇಂದು ರಾಜ್ಯಾದಂತ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾ ಜರುಗುತ್ತಿರುವುದು ಹೊಸ ಕಾನೂನಿಗಾಗಲಿ, ತಿದ್ದುಪಡಿಗಾಗಿ ಅಲ್ಲ. ಪ್ರಸ್ತುತ ಜಾರಿಯಲ್ಲಿರುವ ಕಾನೂನು, ಅನುಷ್ಠಾನಕ್ಕಾಗಿ ಹೋರಾಟ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಸ್ವಾತಂತ್ರ್ಯ ಭವನದ ಪದ್ಮಶ್ರೀ ಸುಕ್ರಿ ಮತ್ತು ತುಳಸಿ ಗೌಡ ವೇದಿಕೆಯಲ್ಲಿ ಬೃಹತ್ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾವನ್ನುದ್ದೇಶಿಸಿ ಮಾತನಾಡಿ, ಕಾನೂನು ಜಾರಿಗೆ ಬಂದು ೧೮ ವರ್ಷಗಳಾದರೂ ಕಾನೂನಿಗೆ ವ್ಯತಿರಿಕ್ತವಾಗಿ ಮತ್ತು ಕಾನೂನಿನ ವಿಧಿವಿಧಾನ ಅನುಸರಿಸದೇ ಅರಣ್ಯವಾಸಿಗಳ ತಿರಸ್ಕಾರವಾಗಿದೆ. ೩ ತಲೆಮಾರಿನ ವೈಯಕ್ತಿಕ ದಾಖಲೆಗಳ ಅವಶ್ಯಕತೆ ಪರಿಗಣಿಸುವದರಿಂದ ತಿರಸ್ಕಾರಕ್ಕೆ ಕಾರಣವಾಗಿದೆ. ಈಗಾಗಲೇ ಅನುಷ್ಠಾನ ಇರುವ ಕಾನೂನಡಿಯಲ್ಲಿಯೇ ರಾಜ್ಯಾದಂತ ೨೩೦೦ಕ್ಕೂ ಮಿಕ್ಕಿ ಪಾರಂಪರಿಕ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ವಿತರಿಸಲಾಗಿದೆ. ಈ ಹಿಂದೆ ನೀಡಿದ ಸಾಗುವಳಿ ಹಕ್ಕಿಗೆ ಅನುಸರಿಸದ ಮಾನದಂಡವನ್ನೇ ಇನ್ನುಳಿದ ಪಾರಂಪರಿಕ ಅರಣ್ಯವಾಸಿಗಳಿಗೂ ನೀತಿನಿಯಮ ಅನುಸರಿಸಲು ಅವರು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ರಮಾನಂದ ನಾಯ್ಕ ಅಚವೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಭವನದಿಂದ ಅರಣ್ಯವಾಸಿಗಳ ಬೃಹತ್ ಜಾಥಾಕ್ಕೆ ರವಿಂದ್ರ ನಾಯ್ಕ ಚಾಲನೆ ನೀಡಿದರು. ಜಾಥಾವು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು.

ನಾಗರಾಜ ನಾಯ್ಕ, ಗೌರೀಶ ಗೌಡ, ಮುಂತಾದವರು ಮಾತನಾಡಿದರು. ಬಾಲಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿಜು ಪಿಳ್ಳೆ, ಅರವಿಂದ ಗೌಡ, ವಿನೋದ ನಾಯ್ಕ ಹಟ್ಟಿಕೇರಿ, ಶಂಕರ ನಾಯ್ಕ, ಹೊಸಗದ್ದೆ, ವೆಂಕಟರಮಣ ನಾಯ್ಕ ಮಂಜುಗುಣಿ ಉಪಸ್ಥಿತರಿದ್ದರು. ವಿನಾಯಕ ಮರಾಠಿ ನಿರ್ವಹಿಸಿದರು. ಶಂಕರ ಕೊಡಿಯಾ, ರಾಜೇಶ ಮಿತ್ರ ನಾಯ್ಕ ವಂದಿಸಿದರು.