ಸಾರಾಂಶ
ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರೈತರು ಒತ್ತುವರಿ ಮಾಡಿರುವ 3 ಎಕರೆ ಒಳಗಿನ ಅರಣ್ಯ ಭೂಮಿ ತೆರವುಗೊಳಿಸುವುದಿಲ್ಲ. ಆದರೆ, ಹೈಕೋರ್ಟ್ ಆದೇಶ ಇರುವ ಅರಣ್ಯ ಒತ್ತುವರಿ ಭೂಮಿ ತೆರವುಗೊಳಿಸಲಾಗುವುದು ಎಂದು ನ.ರಾ.ಪುರ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ ತಿಳಿಸಿದರು.
ಶನಿವಾರ ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಪಂ 2024-25 ನೇ ಸಾಲಿನ ಗ್ರಾಮ ಸಭೆಯಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. 3 ಎಕರೆ ಒಳಗಿನ ಒತ್ತುವರಿ ತೆರವುಗೊಳಿಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಕೆಲವು ವಾಟ್ಸಾಪ್ ಗಳಲ್ಲಿ ಬರುವ ಸುದ್ದಿ ನೋಡಿ ರೈತರು ಆತಂಕಗೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ.ಸಮಾಜದಲ್ಲಿ ಕೆಲವರು ಭಯ ಹುಟ್ಟಿಸುತ್ತಿದ್ದಾರೆ ಎಂದರು.ಗ್ರಾಮಸ್ಥರು ಮಾತನಾಡಿ, ಸರ್ಕಾರದ ಜಲ್ ಜೀವನ್ ಮಿಷನ್ ಕಾಮಗಾರಿಯಲ್ಲಿ ಮನ ಬಂದಂತೆ ರಸ್ತೆಗಳನ್ನು ಅಗೆದು, ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗುತ್ತಿದೆ. ನೀರಿನ ಸಂಪನ್ಮೂಲ ಇಲ್ಲದ ಕಡೆ ಪೈಪ್ ಲೈನ್ ಮಾಡಲಾಗಿದೆ. ಮೊದಲು ನೀರಿನಮೂಲ ಕಂಡುಕೊಂಡು ನಂತರ ಪೈಪ್ ಲೈನ್ ಮಾಡಬೇಕಾಗಿತ್ತು. ಆದರೆ, ಜನ ಪ್ರತಿನಿಧಿಗಳ ಗಮನಕ್ಕೂ ಬಾರದ ರೀತಿಯಲ್ಲಿ ಕಾಮಗಾರಿ ಮಾಡಲಾಗಿದೆ. ಶೆಟ್ಟಿಕೊಪ್ಪದಲ್ಲಿ 30 ವರ್ಷ ಹಳೆಯದಾದ 50 ಸಾವಿರ ಲೀ. ಸಾಮಾರ್ಥ್ಯದ ನೀರಿನ ತೊಟ್ಟಿ ಬಿರುಕು ಬಿಟ್ಟಿದೆ. ಈ ಟ್ಯಾಂಕಿಗೆ ಖಾಸಗಿ ಬೋರ್ ವೆಲ್ ನಿಂದ ನೀರು ಬಿಡಲಾಗುತ್ತಿದೆ. ಜೆಜೆಎಂ ಪ್ಲಾನಿಂಗ್ ನಲ್ಲಿ ಶೆಟ್ಟಿಕೊಪ್ಪಕ್ಕೆ ಟ್ಯಾಂಕ್ ಇಲ್ಲ. ಬೋರ್ ವೆಲ್ ಇಲ್ಲವಾಗಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆ ಎಎಸ್‌ಐ ನಾಗರಾಜ್ ಮಾತನಾಡಿ,ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬೆಡಶೀಟ್ ಮಾರುವ ನೆಪದಲ್ಲಿ ಇರಾನಿ ಯುವಕರ ಗುಂಪೊಂದು ಬರುತ್ತಿದೆ. ಇವರು ಗ್ರಾಮದ ಚಲನ ವಲನ ಗಮನಿಸಿ ಕಳ್ಳತನ ಮಾಡುವ ಸಂಚು ಅಡಗಿದೆ. ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಗ್ರಾಪಂ ಅಭಿವೃದ್ಧಿಗೆ ಗ್ರಾಮಸ್ಥರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ಗ್ರಾಮ ಸಭೆ ಮೂಲಕ ಪರಿಹಾರ ಕಂಡುಕೊಳ್ಳಬೇಕು.ಈ ಬಾರಿ ವಿವಿಧ ಯೋಜನೆಗಳಡಿ 50 ಲಕ್ಷ ಅನುದಾನ ಸದ್ಬಳಕೆ ಮಾಡಲಾಗುತ್ತಿದೆ. ಬಾಳೆಕೊಪ್ಪದಲ್ಲಿ ಶೀರ್ಘ ದಾದಿಯರ ಉಪ ಕೇಂದ್ರ ಪ್ರಾರಂಭವಾಗಲಿದೆ. ಕಳೆದ ಬಾರಿ ಗ್ರಾಪಂ ನಿಂದ ವಿವಿಧ ವಸತಿ ಯೋಜನೆಯಡಿ 54 ಮನೆಗಳನ್ನು ನೀಡಲಾಗಿದೆ. 2010 ರಿಂದಲೂ ಕೆಲವು ಮನೆ ಮಂಜೂರಾಗಿದ್ದರೂ ಕೆಲವು ಫಲಾನುಭವಿಗಳು ಇನ್ನೂ ಮನೆ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದ ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗಿದೆ. ಗ್ರಾಪಂ ವ್ಯಾಪ್ತಿಯ ಬಸ್ ನಿಲ್ದಾಣ, ಶೌಚಾಲಯ ಗ್ರಾಮ ಪಂಚಾಯಿತಿ ಸ್ವತ್ತುಗಳಾಗಿದೆ. ಇವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ವಿರೋದಿಸುವ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಗ್ರಾಪಂ ಸದಸ್ಯರಾದ ಶೈಲಾ ಮಹೇಶ್, ಚಂದ್ರಶೇಖರ್, ರವೀಂದ್ರ, ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ಅಶ್ವಿನಿ, ಲಿಲ್ಲಿ, ಪೂರ್ಣಿಮ, ನೋಡಲ್ ಅಧಿಕಾರಿ ಸಹಾಯಕ ತೋಟಗಾರಿಕೆ ನಿರ್ದೇಶಕ ಪುನೀತ್, ಪಿಡಿಒ ವಿಂದ್ಯಾ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.