ಕಾಡ್ಗಿಚ್ಚು: ನೈಸರ್ಗಿಕಗಿಂತ ಕಿಡಿಗೇಡಿಗಳ ಕೃತ್ಯವೇ ಹೆಚ್ಚು

| Published : Feb 12 2024, 01:33 AM IST

ಸಾರಾಂಶ

ಕಾಡಿಗೆ ಬೆಂಕಿ. ಇದು, ನೈಸರ್ಗಿಕವಾಗಿ ಅಲ್ಲ, ವಿಕೃತ ಮನಸ್ಸಿನ ಜನರು ಕೊಡ್ತಾ ಇರೋ ಬೆಂಕಿ. - ಮಲೆನಾಡಿನ ಬಹಳಷ್ಟು ಮಂದಿ ಈ ಮಾತನ್ನು ಅಲ್ಲಗಳೆಯುವುದಿಲ್ಲ. ಕಾರಣ, ಕೆಲವು ವರ್ಷಗಳ ಹಿಂದೆ ಕಾಡಿಗೆ ಬೆಂಕಿ ಕೊಡುವವರು ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿದ್ದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಡಿನ ಬೆಂಕಿ ಇದು ನೈಸರ್ಗಿಕವಾದುದಲ್ಲ. ವಕೃತ ಮನಸ್ಸಿನ ಜನ ಕೊಡ್ತಾಇರೋ ಬೆಂಕಿ.

- ಮಲೆನಾಡಿನ ಬಹಳಷ್ಟು ಮಂದಿ ಈ ಮಾತನ್ನು ಅಲ್ಲಗಳೆಯುವುದಿಲ್ಲ. ಕಾರಣ, ಕೆಲವು ವರ್ಷಗಳ ಹಿಂದೆ ಕಾಡಿಗೆ ಬೆಂಕಿ ಕೊಡುವವರು ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿದ್ದರು. ಮಳೆಗಾಲ ಕಳೆದು ಚಳಿಗಾಲ ಆರಂಭವಾದರೆ ಬೆಟ್ಟದಲ್ಲಿನ ಹಾಗೂ ರಸ್ತೆಯ ಆಸುಪಾಸಿನಲ್ಲಿರುವ ಹುಲ್ಲು ಒಣಗುತ್ತಾ ಹೋಗುತ್ತದೆ. ಮರ ಗಿಡದಲ್ಲಿನ ಎಲೆಗಳು ಉದುರುತ್ತವೆ. ಅದಕ್ಕೆ ದಾರಿಯಲ್ಲಿ ಹೋಗುವವರು ಬೆಂಕಿ ಕೊಟ್ಟು ಮುಂದೆ ಸಾಗುತ್ತಾರೆ. ಇಂತಹ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಕಾಡಿಗೆ ಬೆಂಕಿ ಹತ್ತಿ ಹುಲ್ಲು ಮಾತ್ರವಲ್ಲ, ಗಿಡ ಮರಗಳಿಗೆ ಬೆಂಕಿ ಹೊತ್ತುವ ಜತೆಗೆ ಕಾಡಿನ ಪ್ರಾಣಿ ಪಕ್ಷಿಗಳ ಜೀವಕ್ಕೆ ಕುತ್ತು ಬರಲಿದೆ. 2003ರಲ್ಲಿ ಮುತ್ತೋಡಿ ಅಭಯಾರಣ್ಯದಲ್ಲಿ ಬೆಂಕಿ ಹೊತ್ತು ಅಪಾರ ಹಾನಿ ಸಂಭವಿಸಿತ್ತು. ಕಾಡಿಗೆ ಬೆಂಕಿ ಹತ್ತಿಕೊಳ್ಳಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ದಾರಿ ಉದ್ದಕ್ಕೂ ಫೈರ್ ಲೈನ್ ಮಾಡಿರುತ್ತದೆ. ಅದನ್ನು ದಾಟಿ ಬೆಂಕಿ ಕಾಡಿನೊಳಗೆ ಎಂಟ್ರಿ ಕೊಡಲು ಸಾಧ್ಯವಿಲ್ಲ. ಕಾಡಿಗೆ ಬೆಂಕಿ ಬಿದ್ದರೆ ಕೂಡಲೇ ಗಮನಕ್ಕೆ ಬರಲು ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆ ಮಾನಿಟರಿಂಗ್ ಸಿಸ್ಟಮ್ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಮುಂಜಾಗ್ರತೆ: ಕಾಡಿಗೆ ಬೀಳುವ ಬೆಂಕಿ ನಿಯಂತ್ರಣಕ್ಕೆ ಚಿಕ್ಕಮಗಳೂರು ವಿಭಾಗದ ಅರಣ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಡಿಎಫ್‌ಒ ರಮೇಶ್‌ಬಾಬು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಈಗಾಗಲೇ ಫೈರ್ ಲೈನ್ ಮಾಡಿದ್ದೇವೆ. ಚಿಕ್ಕಮಗಳೂರು ವಿಭಾಗದ ಐದು ವಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸುಮಾರು 22ಕ್ಕೂ ಹೆಚ್ಚು ಮಂದಿ ಪ್ಲಾಂಟೇಷನ್ ವಾಚರ್‌ಗಳು, ಜನವರಿಯಿಂದ ಮೇ ಅಂತ್ಯದವರೆಗೆ ಕರ್ತವ್ಯ ನಿರ್ವಹಿಸಲು 43 ಮಂದಿ ಫೈರ್ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಾಡು ಅಥವಾ ಅದಕ್ಕೆ ಹೊಂದಿಕೊಂಡಿರುವ ಹುಲ್ಲುಗಾವಲಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಕೂಡಲೇ ಸ್ಥಳಕ್ಕೆ ತೆರಳಲು ಎರಡು ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಲೈಫ್‌ ಲೈನ್ ಫೀಡ್ಸ್ ಸಂಸ್ಥೆಯವರು ಈ ಸಂದರ್ಭದಲ್ಲಿ ಬಳಸಿಕೊಳ್ಳಲು ಒಂದು ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. --- ಬಾಕ್ಸ್ ---

ಕಾಡಿಗೆ ಬೆಂಕಿ ಬಿದ್ದರೆ ಕೂಡಲೇ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗಿದೆ. ಕರಪತ್ರ ಹಂಚಲಾಗಿದೆ. ತಕ್ಷಣಕ್ಕೆ ಸಂಪರ್ಕಿಸಲು ಹೆಲ್ಪ್ ಲೈನ್ ಸಂಖ್ಯೆ 1926 ಅನ್ನು ಸಹ ಗೋಡೆಗಳಿಗೆ ಬರೆಸಲಾಗಿದೆ. ಕಿಡಿಗೇಡಿಗಳು ಕಾಡಿಗೆ ಬೆಂಕಿ ನೀಡಿರುವುದು ದೃಢಪಟ್ಟರೆ ಅವರ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ಜೈಲು ವಾಸದ ಜತೆಗೆ ದಂಡವೂ ಸಹ ವಿಧಿಸಲಾಗುವುದು.

- ರಮೇಶ್‌ಬಾಬು ಡಿಎಫ್‌ಓ ಚಿಕ್ಕಮಗಳೂರು ---ಮುಳ್ಳಯ್ಯನಗಿರಿ ತಪ್ಪಲಲ್ಲಿ ಬೆಂಕಿ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಲ್ಲಿ ಇರುವ ಚನ್ನಗೊಂಡನಹಳ್ಳಿ ಬಳಿ ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಹುಲ್ಲುಗಾವಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ದಿಢೀರ್ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಫೈರ್ ವಾಚರ್ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚನ್ನಗೊಂಡನಹಳ್ಳಿಯ ಸುತ್ತಮುತ್ತ ಸುಮಾರು 4 ಎಕರೆಯಷ್ಟು ಹುಲ್ಲುಗಾವಲು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಶನಿವಾರದಂದು ಚುರ್ಚೆಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿನ ಬೆಂಕಿಯನ್ನು ಕೂಡ ನಂದಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.