ಶಿರಸಿ ತಾಲೂಕಿನ ಗೋಳಿಕಟ್ಟಾದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಹಕಾರಿ ಸಂಘದ ಲೀಸ್ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಧಾರವಾಡ ಹೈಕೋರ್ಟ್ ಆದೇಶದಂತೆ ಅರಣ್ಯ ಇಲಾಖೆಯವರು ಭಾನುವಾರ ಬೆಳಗ್ಗೆ ಸಂಘದ ಬಳಕೆಯಲ್ಲಿದ್ದ 389.07 ಎಕರೆ ಜಾಗದ ತೆರವು ಕಾರ್ಯಾಚರಣೆ ನಡೆಸುತ್ತಿದ್ದಂತೆ ರೈತರು ವಿರೋಧ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಾರವಾರ
ಶಿರಸಿ ತಾಲೂಕಿನ ಗೋಳಿಕಟ್ಟಾದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಹಕಾರಿ ಸಂಘದ ಲೀಸ್ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಧಾರವಾಡ ಹೈಕೋರ್ಟ್ ಆದೇಶದಂತೆ ಅರಣ್ಯ ಇಲಾಖೆಯವರು ಭಾನುವಾರ ಬೆಳಗ್ಗೆ ಸಂಘದ ಬಳಕೆಯಲ್ಲಿದ್ದ 389.07 ಎಕರೆ ಜಾಗದ ತೆರವು ಕಾರ್ಯಾಚರಣೆ ನಡೆಸುತ್ತಿದ್ದಂತೆ ರೈತರು ವಿರೋಧ ವ್ಯಕ್ತಪಡಿಸಿದರು.ಹತ್ತಾರು ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಾಗವನ್ನು ತಮ್ಮ ಸುಪರ್ದಿಗೆ ಪಡೆಯುವ ಪ್ರಕ್ರಿಯೆ ಆರಂಭಿಸಿದರು. ಈ ವೇಳೆ ವಿರೋಧ ವ್ಯಕ್ತಪಡಿಸಿದ ಮಹಿಳೆ ವಿಷಸೇವಿಸಿ ಅಸ್ವಸ್ಥಗೊಂಡ ಘಟನೆಯೂ ನಡೆಯಿತು.
ಭಾನುವಾರ ಬೆಳಗ್ಗೆ ಸುಮಾರು 5 ಗಂಟೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮೊದಲ ಹಂತವಾಗಿ ಖಾಲಿ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.ಧಾರವಾಡ ಹೈಕೋರ್ಟ್‌ನ ಆದೇಶದಂತೆ ಅರಣ್ಯ ಜಾಗವನ್ನು ಇಲಾಖೆಯ ಸುಪರ್ದಿಗೆ ಪಡೆಯಲಾಗುತ್ತಿದೆ. ನ್ಯಾಯಾಲಯದ ನಿರ್ದೇಶನದ ಅನ್ವಯವೇ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಹಕರಿಸುವಂತೆ ಅಧಿಕಾರಿಗಳು ರೈತರ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಡಿಎಸ್ಪಿ ಗೀತಾ ಪಾಟೀಲ, ಸಿಪಿಐ ಇ.ಸಿ. ಸಂಪತ್ ನೇತೃತ್ವದಲ್ಲಿ ಸಿಬ್ಬಂದಿ ಮುಂಜಾಗ್ರತೆ ಕ್ರಮ ಕೈಗೊಂಡರು.
ಜಾಗ ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆಯ ಭಾಗವಾಗಿ ಸ್ಥಳ ಪರಿಶೀಲನೆ ನಡೆಸಿ, ಗಿಡ ನಾಟಿ ಮಾಡುವ ಮೂಲಕ ಅರಣ್ಯ ಇಲಾಖೆಯ ಸುಪರ್ದಿಗೆ ಪಡೆಯುವ ಕಾರ್ಯ ಆರಂಭಿಸಲಾಯಿತು. ಜಾಗದ ಪ್ರವೇಶದ್ವಾರದಲ್ಲಿ ನಿರ್ಬಂಧ ಹೇರಲಾಗಿದ್ದು, ಕಾರ್ಯಾಚರಣೆಯ ಸಂದರ್ಭ ಗ್ರಾಮಸ್ಥರಿಗೆ ಒಳ ಪ್ರವೇಶಿಸಲು ಅವಕಾಶ ನೀಡದಿರುವುದಕ್ಕೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.ಘಟನೆಯ ಮಾಹಿತಿ ತಿಳಿದ ತಕ್ಷಣ ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿ, ಮಾಹಿತಿ ಪಡೆದರು.
ಕಾಮಧೇನು ಹಣ್ಣು ಮತ್ತು ಹಾಲು ಸಂಸ್ಕರಣಾ ಸಹಕಾರಿ ಸಂಘದ ವೃತ್ತಿಪರ ನಿರ್ದೇಶಕ ರಾಜೇಶ ಶರ್ಮಾ ಗೋಳಿಕಟ್ಟಾ, ಕಾಮಧೇನು ಸೊಸೈಟಿ ಅಧ್ಯಕ್ಷ ವಿನಾಯಕ ಹೆಗಡೆ ಮುಂಡಿಗೇಸರ ಮಾತನಾಡಿದರು.ಅಹಿತಕರ ಘಟನೆ ನಡೆಯದಂತೆ ಸಹಾಯಕ ಆಯುಕ್ತ ಚಂದ್ರಶೇಖರ ಆರ್.ಜಿ., ಡಿಎಸ್ಪಿ ಗೀತಾ ಪಾಟೀಲ, ತಹಸೀಲ್ದಾರ್ ಪಟ್ಟರಾಜ ಗೌಡ, ಸಿಪಿಐ ಸಂತಪ ಇ.ಸಿ. ಹಾಗೂ ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಸ್ಥಳದಲ್ಲಿದ್ದರು.
ಪಾಣಾಪಾಯದಿಂದ ಮಹಿಳೆ ಪಾರುಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಮಹಿಳೆಯರು ಮತ್ತು ರೈತರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಪೊಲೀಸರು ಆಕೆಯ ಕೈನಿಂದ ವಿಷಯ ಬಾಟಲಿ ವಶಪಡಿಸಿಕೊಂಡು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಸೂಕ್ತ ಚಿಕಿತ್ಸೆಯಿಂದ ಪಾಣಾಪಾಯದಿಂದ ಪಾರಾಗಿದ್ದಾರೆ.ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಕೆ
ಧಾರವಾಡ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಲಾಗುವುದು. ಇದಕ್ಕಾಗಿ ನ. 10, 2026ರ ವರೆಗೆ ಗಡುವು ಇರುವುದಾಗಿ ಹೇಳಲಾಗಿದೆ. ಇದೇ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ಒಳಗೊಂಡಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಅರ್ಹ ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆಯಡಿ ತಮ್ಮ ಹಕ್ಕುಗಳಿಗಾಗಿ ಕ್ಲೇಮ್ ಸಲ್ಲಿಸಲಿದ್ದಾರೆ. ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸಾಮೂಹಿಕ ಮನವಿಯನ್ನೂ ಸಲ್ಲಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ.