ವನ್ಯಜೀವಿ ಉತ್ಪನ್ನಗಳ ವಿಚಾರದಲ್ಲಿ ಅರಣ್ಯಾಧಿಕಾರಿಗಳು ಕಾನೂನು ಮೀರಬಾರದು: ಶಾಸಕ ಪೊನ್ನಣ್ಣ
KannadaprabhaNewsNetwork | Published : Nov 01 2023, 01:00 AM IST / Updated: Nov 01 2023, 01:01 AM IST
ವನ್ಯಜೀವಿ ಉತ್ಪನ್ನಗಳ ವಿಚಾರದಲ್ಲಿ ಅರಣ್ಯಾಧಿಕಾರಿಗಳು ಕಾನೂನು ಮೀರಬಾರದು: ಶಾಸಕ ಪೊನ್ನಣ್ಣ
ಸಾರಾಂಶ
ಸರ್ಕಾರದ ಗ್ಯಾರಂಟಿಗಳನ್ನು ಪೂರೈಸಲು ಸುಮಾರು 4 ತಿಂಗಳ ಕಾಲ ಆರ್ಥಿಕ ಹೊರೆಯಾಗಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಾಗುತ್ತಿದ್ದು, ಅನುದಾನ ಬಿಡುಗಡೆಯಾಗಲಿದೆ. ಕೊಡಗಿನಲ್ಲೂ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳಲಿದೆ ಎಂದು ಪೊನ್ನಣ್ಣ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ ಹುಲಿ ಉಗುರು ಸೇರಿದಂತೆ ವನ್ಯಜೀವಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕಾನೂನು ಮೀರಬಾರದು. ಈ ವಿಚಾರದಲ್ಲಿ ಕೊಡಗಿನ ಜನ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ಯಜೀವಿ ಉತ್ಪನ್ನಗಳ ವಿಚಾರದಲ್ಲಿ ಅರಣ್ಯ ಅಧಿಕಾರಿಗಳಿಗೆ ಸಚಿವರು ಯಾವುದೇ ನಿರ್ದೇಶನ ನೀಡಿಲ್ಲ. ಅಧಿಕಾರಿಗಳು ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದು, ಕಾನೂನು ಮೀರುತ್ತಿರುವುದು ಕಂಡು ಬಂದಿದೆ. ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಟ ಜಗ್ಗೇಶ್ ಅವರ ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ಇದು ಇತ್ಯರ್ಥವಾಗುವವರೆಗೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಬಾರದು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಚರ್ಚಿಸಿ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು. ಪೂರ್ವಜರ ಕಾಲದಿಂದಲೂ ಇರುವ ವನ್ಯಜೀವಿ ಉತ್ಪನ್ನಗಳಿಗೆ ಕಾನೂನಿನಲ್ಲಿ ರಿಯಾಯಿತಿ ಇದೆ. ದಾರಿಯಲ್ಲಿ ಹೋಗುವಾಗ ಹುಲಿ ಉಗುರು ಬಿದ್ದು ಸಿಕ್ಕಿತೆಂದರೆ ಅದು ಅಪರಾಧವಾಗಲು ಸಾಧ್ಯವಿಲ್ಲ. ಮೊದಲು ಅಧಿಕಾರಿಗಳು ಕಾನೂನನ್ನು ಅರಿತುಕೊಳ್ಳಬೇಕು. ಕಾನೂನು ಇರುವುದು ಜನರನ್ನು ರಕ್ಷಣೆ ಮಾಡಲು, ಆದ್ದರಿಂದ ಕೊಡಗಿನ ಜನ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದರು. ಅಭಿವೃದ್ಧಿ ಕಾರ್ಯಗಳಿಗೆ ವೇಗ: ಸರ್ಕಾರದ ಗ್ಯಾರಂಟಿಗಳನ್ನು ಪೂರೈಸಲು ಸುಮಾರು 4 ತಿಂಗಳ ಕಾಲ ಆರ್ಥಿಕ ಹೊರೆಯಾಗಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಾಗುತ್ತಿದ್ದು, ಅನುದಾನ ಬಿಡುಗಡೆಯಾಗಲಿದೆ. ಕೊಡಗಿನಲ್ಲೂ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳಲಿದೆ ಎಂದು ಪೊನ್ನಣ್ಣ ಸ್ಪಷ್ಟಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ, ವಿರಾಜಪೇಟೆ ಕ್ಷೇತ್ರದಲ್ಲಿ ಲಂಚದ ಕುರಿತು ಯಾವುದೇ ದೂರುಗಳು ಕೇಳಿ ಬಂದಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಕೇವಲ ನನ್ನಿಂದ ಮಾತ್ರ ಸಾಧ್ಯವಿಲ್ಲ, ಜನರು ಕೂಡ ಜಾಗೃತರಾಗಬೇಕು. ಲಂಚ ಕೇಳಿದಾಕ್ಷಣ ನೀಡದೆ ಅದನ್ನು ಪ್ರತಿಭಟಿಸಬೇಕು, ಧ್ವನಿ ಮುದ್ರಣ ಅಥವಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕು. ಸೂಕ್ತ ಸಾಕ್ಷ್ಯ ಸಹಿತ ದೂರು ನೀಡಿದರೆ ನಾನು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದರು. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕೆಪಿಸಿಸಿ ಪ್ರಮುಖ ಟಿ.ಪಿ. ರಮೇಶ್ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಹಾಜರಿದ್ದರು. ಆಪರೇಷನ್ ಕಮಲಕ್ಕೆ ತಕ್ಕ ಉತ್ತರ ನೀಡಿದ್ದಾರೆ ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ಎ.ಎಸ್. ಪೊನ್ನಣ್ಣ ಹೇಳಿದರು. ಹಿಂದೆಯೂ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದವರನ್ನು ಜನರು ಸೋಲಿಸಿದ್ದಾರೆ. ಜನರ ತೀರ್ಪನ್ನು ನಾವು ಗೌರವಿಸಬೇಕು. ಆಗ ಮಾತ್ರ ಜನರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಪದೇಪದೇ ಪಕ್ಷಾಂತರ ನಿಷೇಧ ಕಾನೂನು ಉಲ್ಲಂಘನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆಪರೇಷನ್ ಕಮಲ ಪ್ರಯತ್ನ ಮಾಡುವುದು ಅವರ ಚಾಳಿ. ಇದನ್ನು ಶಾಸಕರು ಮಾತ್ರ ಅಲ್ಲ ಜನರು ಕೂಡ ಗಮನಿಸಿದ್ದಾರೆ. ಯಾವುದೇ ಸರ್ಕಾರ ಇದ್ದರೂ 34 ಜನ ಮಾತ್ರ ಸಚಿವರಾಗಲು ಸಾಧ್ಯ. 115 ಶಾಸಕರಲ್ಲಿ 34 ಜನ ಮಾತ್ರ ಮಂತ್ರಿಯಾಗಲು ಸಾಧ್ಯ. ಹಾಗಂತ ಉಳಿದವರು ಬೇರೆ ಪಕ್ಷಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮದು ಸುಭದ್ರವಾದ ಸರ್ಕಾರವಿದೆ. 136 ನಮ್ಮ ಶಾಸಕರಲ್ಲದೆ ಮೂವರು ಸ್ವತಂತ್ರ ಶಾಸಕರು ಎಂದರು. ಎಂ.ಪಿ. ಪ್ರಕಾಶ್ ಅವರ ಮಗಳು, ದರ್ಶನ್ ಪುಟ್ಟಣ್ಣಯ್ಯ ನಮ್ಮೊಂದಿಗೆ ಇದ್ದಾರೆ. ಆದ್ದರಿಂದ ಯಾರು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸಿಎಂ, ಡಿಸಿಎಂ ನಡುವೆ ಯಾವುದೇ ಗೊಂದಲವೂ ಇಲ್ಲ. ಗೊಂದಲವಿದೆ ಎಂದು ವಿರೋಧ ಪಕ್ಷದವರು ಜನರ ಮನಸ್ಸಿನಲ್ಲಿ ಸೃಷ್ಟಿಸುತ್ತಿದ್ದಾರೆ. ಅದೆಲ್ಲ ಅವರಿಗೆ ವರ್ಕೌಟ್ ಆಗುವುದಿಲ್ಲ. ಕಳೆದ ಲೋಕಸಭೆಯಲ್ಲಿ 25 ಸಂಸದರನ್ನು ಬಿಜೆಪಿ ಗೆಲ್ಲಿಸಿಕೊಂಡಿತ್ತು. ಅದನ್ನು ಇಟ್ಟುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಗೆಲ್ಲಲು ಆಗಲಿಲ್ಲ. ಈಗ 19 ಸ್ಥಾನ ಶಾಸಕರನ್ನು ಗೆಲ್ಲಿಸಿಕೊಂಡಿರುವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದ ವ್ಯಂಗ್ಯವಾಡಿದರು.