ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಪತಿ, ಮಗನೊಂದಿಗೆ ಕಾಡಿನಿಂದ ಜೇನು ತರಲು ಹೋಗಿ ವಾಪಸ್ ಆಗುವಾಗ ಆನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಅಂತರಸಂತೆ ಹೋಬಳಿ ಬಳ್ಳೆ ಹಾಡಿಯಲ್ಲಿ ಜರುಗಿದೆ.ಬಳ್ಳೆ ಹಾಡಿಯ ಜೇನು ಕುರುಬ ಜನಾಂಗದ ರಾಜು ಎಂಬವರ ಪತ್ನಿ ಸೀತಾ (40) ಮೃತಪಟ್ಟವರು.ರಾಜು ಪತ್ನಿ ಸೀತಾ ಹಾಗೂ ಮಗ ಸುದೀಪನ ಜೊತೆ ಮಂಗಳವಾರ ಬೆಳಗ್ಗೆ ಕಾಡಿನಿಂದ ಜೇನು ತರುವುದಕ್ಕಾಗಿ ತೆರಳಿದ್ದರು. ಸಂಜೆ ಮನೆಗೆ ಹಿಂತಿರುಗುತ್ತಿರುವಾಗ ಆನೆ ದಾಳಿ ನಡೆಸಿದೆ. ಆನೆ ತುಳಿತಕ್ಕೆ ಸಿಲುಕಿ ಸೀತಾ ಸ್ಥಳದಲ್ಲೆ ಮೃತಪಟ್ಟಿದ್ದು, ರಾಜು ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಮೃತ ಸೀತಾ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅರಣ್ಯಾಧಿಕಾರಿಗಳಿಗೆ ಶಾಸಕರ ತರಾಟೆಮೃತರ ಅಂತ್ಯಕ್ರಿಯೆಗೆ ಶಾಸಕರು ಆರ್ಥಿಕ ಸಹಾಯ ಮಾಡಿದರು. ಘಟನೆಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿದಿದ್ದರೂ ಸಹ ಯಾರು ಘಟನೆ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಬಾರದಿರುವ ಹಿನ್ನೆಲೆಯಲ್ಲಿ ಶಾಸಕರು ದೂರವಾಣಿ ಮುಖಾಂತರ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೃತ ಸೀತಾ ಅವರ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದರ ಜೊತೆಗೆ ಸರ್ಕಾರದಿಂದ ಬರಬೇಕಾಗಿರುವ ಪರಿಹಾರದ ಹಣವನ್ನು ಶೀಘ್ರವಾಗಿ ಕೊಡಿಸುವುದಾಗಿ ತಿಳಿಸಿದರು. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕು ಗಿರಿಜನ ಅಧಿಕಾರಿ ಜಿ.ಆರ್. ಮಹೇಶ್, ಗಿರಿಜನ ಮುಖಂಡರು ಇದ್ದರು.