ಕಂತನಹಳ್ಳಿ ಕಾಡು ನಾಶಕ್ಕೆ ಅರಣ್ಯಾಧಿಕಾರಿಗಳೇ ಹೊಣೆ

| Published : Feb 06 2025, 12:16 AM IST

ಸಾರಾಂಶ

ಸೊರಬ: ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ ಎಂದು ತಜ್ಞ ವರದಿ ಹೇಳಿದ್ದಾಗ್ಯೂ ಜಿಲ್ಲೆಯ ಅರಣ್ಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸದ ಪರಿಣಾಮ ಈಚೆಗೆ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ನಾಶ, ಅಕ್ರಮ ಮರಳು ದಂಧೆ, ವನ್ಯ ಮೃಗಗಳ ಬೇಟೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಖೇದ ವ್ಯಕ್ತಪಡಿಸಿದರು.

ಸೊರಬ: ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ ಎಂದು ತಜ್ಞ ವರದಿ ಹೇಳಿದ್ದಾಗ್ಯೂ ಜಿಲ್ಲೆಯ ಅರಣ್ಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸದ ಪರಿಣಾಮ ಈಚೆಗೆ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ನಾಶ, ಅಕ್ರಮ ಮರಳು ದಂಧೆ, ವನ್ಯ ಮೃಗಗಳ ಬೇಟೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಖೇದ ವ್ಯಕ್ತಪಡಿಸಿದರು.ತಾಲೂಕಿನ ಕಂತನಹಳ್ಳಿ ಗ್ರಾಮದ ನಿತ್ಯಹರಿದ್ವರ್ಣದ ಕಾಡು ನಾಶವಾದ ಬಗ್ಗೆ ಜ.೨೭ರಂದು ಕಾಡಿನ ದುರ್ಬಳಕೆಯಿಂದ ನೀರಿಗೂ ತತ್ವಾರ ಎಂಬ ಶೀರ್ಷಿಕೆ ಅಡಿಯಲ್ಲಿ ಕನ್ನಡಪ್ರಭ ವರದಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಅವರು, ಕಾಡು ಸಂರಕ್ಷಿಸದ ಅರಣ್ಯಾಧಿಕಾರಿಳನ್ನು ತರಾಟೆಗೆ ತೆಗೆದುಕೊಂಡರು.ಕಂತನಹಳ್ಳಿಯಲ್ಲಿ ಪುರಾತನ ಅನೇಕ ಮರಗಳನ್ನು ಕಡಿದುರುಳಿಸಿರುವುದು ಅರಣ್ಯ ಒತ್ತೂವರಿಗಾಗಿ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಷ್ಟೆಲ್ಲಾ ಬೃಹತ್ ಪ್ರಮಾಣದಲ್ಲಿ ನಾಶವಾಗಿರುವುದನ್ನು ಗಮನಿಸಿದರೆ ನಾಶದ ಹಿಂದೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಸಹಕರಿಸಿದಂತೆ ಕಾಣಿಸುತ್ತಿದೆ. ಕೂಡಲೇ ನಾಶದ ಕುಕೃತ್ಯದ ಹಿನ್ನೆಲೆ ಪತ್ತೆಹಚ್ಚಿ ಅರಣ್ಯ, ಜೀವವೈವಿಧ್ಯ, ವನ್ಯ ಜೀವಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಅರಣ್ಯಾಧಿಕಾರಿ ಜಾವೀದ್ ಗೆ ಸೂಚಿಸಿದರು.ಗ್ರಾಮದ ಸ.ನಂ. ೮ರ ಅರಣ್ಯದಲ್ಲಿ ನಾಶವಾದ ಬೃಹತ್ ಮರಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ್ಯೂ, ಅರಣ್ಯ ಸಚಿವರೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗ್ಯೂ ಜಿಲ್ಲೆಯ ಯಾವುದೇ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದಿರುವುದು ಅವರ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಯಾವುದೇ ಕಾರಣಕ್ಕೂ ಅರಣ್ಯ ಪ್ರಮಾಣ ತಗ್ಗಿಸಕೂಡದು ಎಂದು ನ್ಯಾಯಾಲಯದ ಆದೇಶವಿದೆ. ಆದರೆ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಈ ಎಲ್ಲಾ ಅರಣ್ಯ ನಾಶಕ್ಕೆ ಇಲಾಖೆಯೆ ಹೊಣೆ ಹೊರಬೇಕು ಎಂದು ಹೇಳಿದರು.ಅರಣ್ಯಾಧಿಕಾರಿ ಜಾವೀದ್ ಮಾತನಾಡಿ, ಈಗಾಗಲೇ ಮರ ಕಡಿದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಎಫ್‌ಐಆರ್ ಹಾಕಲಾಗಿದೆ. ಈ ಸನಂ ಅತಿಕ್ರಮಣದಾರರಿಗೂ ನೋಟಿಸ್ ನೀಡಲಾಗಿದೆ. ಕಾವಲುಗಾರ ಅರಣ್ಯ ಸಿಬ್ಬಂದಿ ಡಿವೈಆರ್‌ಎಫ್‌ಒ ಅವರನ್ನು ವರ್ಗಾಯಿಸಲಾಗಿದೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ಈಗಾಗಲೇ ಸೂಚನೆ ದೊರಕಿದ್ದು, ಶೀಘ್ರವಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ಇದೇ ವೇಳೆ ಮರಗಳ ನಾಶದ ಬೆನ್ನಲ್ಲೇ ಇದೇ ಸನಂ ಪಶ್ಚಿಮ ಭಾಗದಲ್ಲಿ ಹಾಗೂ ಅದಕ್ಕೆ ತಾಗಿಕೊಂಡಿರುವ ಜಂಬೇಹಳ್ಳಿ ಗ್ರಾಮದ ಸನಂ ೨೮ರ ಅರಣ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮನೆ ಕಟ್ಟಡ ಸಾಮಗ್ರಿಗಾಗಿ ಮರಗಳನ್ನು ಕಡಿಯಲಾಗಿದೆ. ಈ ನಾಟ ವ್ಯವಹಾರದ ಹಿಂದೆ ದೊಡ್ಡ ಲಾಭಿಯೆ ಇದ್ದು ತನಿಖೆಯಾಗಲಿ ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿಯ ಪಿಬಿಆರ್ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಎಚ್.ಎಂ.ಪ್ರಶಾಂತ್, ಗಂಗಾಧರಗೌಡ ಹೊಳೆಮರೂರು, ವೃಕ್ಷಲಕ್ಷ ಆಂದೋಲನ ಸಮಿತಿಯ ಎಂ.ಆರ್ ಪಾಟೀಲ್ ಸೇರಿದಂತೆ ಕಾರ್ಯಕರ್ತರು, ಪರಿಸರ ಜಾಗೃತಿ ಟ್ರಸ್ಟ್ ನವರು ಹಾಜರಿದ್ದರು.