ಸಾರಾಂಶ
ಒಂಟಿ ಆನೆಯನ್ನು ಹೆಜ್ಜೆ ಗುರುತಿನ ಆಧಾರದ ಮೇಲೆ ಅರಣ್ಯ ಇಲಾಖೆ, ಎಲಿಫೆಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂಲ ಸ್ಥಾನಕ್ಕೆ ಹಿಮ್ಮೆಟ್ಟಿಸಿದ್ದಾರೆ.
ನರಸಿಂಹರಾಜಪುರ : ಸೀತೂರು ಗ್ರಾಮದಿಂದ ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಕೆರೆಗದ್ದೆಯ ಕೃಷಿಕ ಉಮೇಶ ಅವರನ್ನು ಬಲಿತೆಗೆದುಕೊಂಡು ಶನಿವಾರ ರಾತ್ರಿ, ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಕಾಡು, ತೋಟಗಳ ಮದ್ಯೆ ಪ್ರಯಾಣ ಮಾಡಿ ನರಸಿಂಹರಾಜಪುರ ಭದ್ರಾ ಹಿನ್ನೀರು ಸಮೀಪ ತಲುಪಿದ ಒಂಟಿ ಆನೆಯನ್ನು ಹೆಜ್ಜೆ ಗುರುತಿನ ಆಧಾರದ ಮೇಲೆ ಅರಣ್ಯ ಇಲಾಖೆ, ಎಲಿಫೆಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂಲ ಸ್ಥಾನಕ್ಕೆ ಹಿಮ್ಮೆಟ್ಟಿಸಿದ್ದಾರೆ.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಸೀತೂರು ಗ್ರಾಮದಲ್ಲಿ ಕೆರೆಗದ್ದೆಯ ರೈತ ಉಮೇಶ ಎಂಬುವರನ್ನು ಬಲಿ ಪಡೆದಿದ್ದ ಪುಂಡಾನೆ ಶನಿವಾರ ರಾತ್ರಿ ಸೀತೂರಿನಿಂದ ಹೊರಟು ದೇವಾಲೆ ಕುಣಜ, ಹಳ್ಳಿಬೈಲು,ಮೇಕನಹಡ್ಲು ದಾಟಿ ಬೆಳಗಿನ ಹೊತ್ತಿಗೆ ಈಚಿಕೆರೆ ಸಮೀಪಕ್ಕೆ ಬಂದಿತ್ತು. ಇದರ ಹೆಜ್ಜೆ ಗುರುತಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆನೆಯನ್ನು ಓಡಿಸಿದ್ದಾರೆ.
ನಂತರ ಒಂಟಿ ಆನೆ ಈಚಿಕೆರೆಯಿಂದ ಕಬ್ಬಿಣ ಸೇತುವೆ, ನಾಗಲಾಪುರ, ಸೀಗುವಾನಿ, ಸಿರಿಗಳಲೆ ತಲುಪಿ ಸಂಜೆ ಹೊತ್ತಿಗೆ ರಾವೂರು ,ಲಿಂಗಾಪುರ ಹತ್ತಿರ ಬಂದಿದೆ. ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡಿ ಲಿಂಗಾಪುರ, ಮೀನು ಕ್ಯಾಂಕಿನ ಜನರು ನರಸಿಂಹರಾಜಪುರ ಪಟ್ಟಣ ಕಡೆಗೆ ಬಾರದಂತೆ ಸೂಚಿಸಿದ್ದಾರೆ. ಅಲ್ಲದೆ ಮನೆ ಒಳಗೇ ಇರುವಂತೆ ಎಚ್ಚರಿಕೆ ನೀಡಿದ್ದಾರೆ.
ಅಂತ್ಯಕ್ರಿಯೆ: ಆನೆ ದಾಳಿಯಿಂದ ಮೃತಪಟ್ಟ ಕೆರೆಗದ್ದೆ ಉಮೇಶ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಕೆರೆಗದ್ದೆ ಯಲ್ಲಿ ನಡೆಯಿತು. ಕೊಪ್ಪ ಡಿಎಫ್‌ಒ ನಂದೀಶ್, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಕೊಪ್ಪ ವಲಯ ಅರಣ್ಯಾಧಿಕಾರಿ ರಂಗನಾಥ್, ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಉಮೇಶ್ ಅವರ ನಿಧನಕ್ಕೆ 2 ನಿಮಿಷ ಮೌನಾಚರಣೆ ಮಾಡಲಾಯಿತು.
₹15 ಲಕ್ಷ ಪರಿಹಾರದ ಚೆಕ್ ಹಸ್ತಾಂತರ
ಶಾಸಕ ಟಿ.ಡಿ.ರಾಜೇಗೌಡ ಅವರು ಶನಿವಾರ ರಾತ್ರಿ ಮೃತ ಉಮೇಶ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರವಾಗಿ ₹15 ಲಕ್ಷದ ಚೆಕ್ ಹಸ್ತಾಂತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆನೆ ದಾಳಿಯಿಂದ ಮೃತಪಟ್ಟ ಉಮೇಶ ಕುಟುಂಬಕ್ಕೆ ಸರ್ಕಾರದಿಂದ 15 , ಅರಣ್ಯ ಇಲಾಖೆಯಿಂದ 5 ಲಕ್ಷ ಹಾಗೂ ತಾವು ವೈಯ್ಯಕ್ತಿಕವಾಗಿ 1 ಲಕ್ಷ ಸೇರಿ ಒಟ್ಟು ₹21 ಲಕ್ಷವನ್ನು ಕುಟುಂಬದವರಿಗೆ ನೀಡಲಾಗುತ್ತದೆ. ನಾನು ಅರಣ್ಯ ಮಂತ್ರಿಗಳೊಂದಿಗೆ ಮಾತನಾಡಿ, ಮೃತ ಉಮೇಶ ಅವರ ಮಗನಿಗೆ ಅರಣ್ಯ ಇಲಾಖೆ ಯಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲು ಮನವಿ ಮಾಡಿದ್ದೇನೆ. ಆ ಪುಂಡಾನೆಯನ್ನು ಸೆರೆ ಹಿಡಿಯುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಮುಂದಿನ ಅಧಿವೇಶನದಲ್ಲೂ ಮಲೆನಾಡು ಭಾಗದ 5 ಶಾಸಕರು ಒಟ್ಟಾಗಿ ಈ ವಿಚಾರ ಪ್ರಸ್ತಾಪ ಮಾಡಿ ಆನೆಗಳು ಕಾಡಿನಿಂದ ಬಾರದಂತೆ ರೇಲ್ವೆ ಬ್ಯಾರಿಕೇಡ್ ಹಾಕಲು ಆಗ್ರಹ ಪಡಿಸುತ್ತೇವೆ ಎಂದರು.
ಆನೆ ದಾಳಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ
ಸೀತೂರು ಗ್ರಾಮದ ಕೆರೆಗದ್ದೆ ಉಮೇಶ ಆನೆ ದಾಳಿಗೆ ಸಿಕ್ಕಿ ಮೃತ ಪಡಲು ಅರಣ್ಯ ಇಲಾಖೆ ಹಾಗೂ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ವರ್ಷಗಳಿಂದಲೂ ಮುತ್ತಿನಕೊಪ್ಪ, ಕಡಹಿನಬೈಲು, ಹೊನ್ನೇಕೊಡಿಗೆ, ಸಾರ್ಯ, ಸೂಸಲವಾನಿ, ಆಡುವಳ್ಳಿ, ಮಲ್ಲಂದೂರು, ಕಾನೂರು ಭಾಗದಲ್ಲಿ ಆನೆಗಳು ಕಾಡಿನಿಂದ ಬಂದು ಬೆಳೆ ಹಾನಿ ಮಾಡುತ್ತಿವೆ. ಆನೆಗಳು ಊರಿಗೆ ಬಾರದಂತೆ ಶಾಶ್ವತ ಪರಿಹಾರ ಹಾಗೂ ರೇಲ್ವೆ ಹಳಿಗಳ ಬ್ಯಾರಿಕೇಡ್ ಬೇಲಿ ಹಾಕಬೇಕು ಎಂದು ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಹೋರಾಟ ಮಾಡಿಕೊಂಡು ಬಂದಿತ್ತು. ಈ ಹಿಂದೆ ಮಂಗ, ಹುಲಿಗಳನ್ನು ಈ ಭಾಗದ ಅರಣ್ಯಕ್ಕೆ ತಂದು ಬಿಡಲಾಗಿತ್ತು. ಈಗ ಆನೆಗಳನ್ನು ತಂದು ಬಿಟ್ಟು ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಈ ಪುಂಡಾನ ಸೇರಿ ಇತರ ಆನೆಗಳನ್ನು ಮುಂದಿನ 15 ದಿನದ ಒಳಗೆ ವೈಡ್ ಲೈಪ್ ಅರಣ್ಯಕ್ಕೆ ಓಡಿಸಬೇಕು. ಈಗ ಉಮೇಶ ಅವರ ಕುಟುಂಭಕ್ಕೆ ಸರ್ಕಾರ ನೀಡಿರುವ ಎಲ್ಲಾ ಭರವಸೆ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೊಪ್ಪ ಡಿಎಫ್‌ಒ ಕಚೇರಿ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ತಾಲೂಕು ಕಾರ್ಯದರ್ಶಿ ಪುರುಶೋತ್ತಮ್, ಸಮಿತಿ ಸದಸ್ಯ ಹಾತೂರು ಪ್ರಸನ್ನ ಇದ್ದರು.
ಆನೆ ಓಡಿಸಲು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಿ: ಬಸವರಾಜ್
ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಪಿ.ಕೆ.ಬಸವರಾಜ್ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನೆ ದಾಳಿಯಿಂದ ಮೃತ ಪಟ್ಟ ಉಮೇಶ ಅವರ ಕುಟುಂಬಕ್ಕೆ ಸರ್ಕಾರ 15 ಲಕ್ಷ ಪರಿಹಾರ ನೀಡಿದೆ. ಆದರೆ, ಹೋದ ಜೀವ ಬರುತ್ತದೆಯೇ? ಕೆಲವು ವರ್ಷದಿಂದ ಸೀತೂರು ಗ್ರಾಪಂಗೆ ಸೇರಿದ ಹಾತೂರು, ಮಲ್ಲಂದೂರು ಭಾಗದಲ್ಲಿ ಕಾಡಾನೆ ಬಂದಾಗ ಅವುಗಳನ್ನು ಓಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಈಗ ತಾಲೂಕಿನ ಎಲ್ಲಾ ಭಾಗದಲ್ಲೂ ಆನೆ ಸುತ್ತಾಡುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ನರಸಿಂಹರಾಜಪುರ ತಾಲೂಕಿನಲ್ಲಿರುವ ಆನೆಗಳನ್ನು ಅದರ ಮೂಲ ಸ್ಥಾನಕ್ಕೆ ಓಡಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗುತ್ತಿದೆ. ಶಾಸಕರು ಅಧಿವೇಶನದಲ್ಲಿ ಆನೆಗಳ ವಿಚಾರ ಪ್ರಸ್ತಾಪ ಮಾಡಿ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ.ಜಾನಕೀರಾಂ ಇದ್ದರು.